ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಡ್ಯದಲ್ಲಿ ನಡೆದಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳನ್ನು ಕಾರ್ಯಗತಗೊಳಿಸುವ ಸಂಬಂಧ ಚರ್ಚಿಸಲು ಸಂಬಂಧಪಟ್ಟ ಎಲ್ಲರ ಸಭೆ ಕರೆಯಲು ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವರಾಜ್ ತಂಗಡಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಡ್ಯದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಆರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಈ ಎಲ್ಲ ವಿಷಯಗಳನ್ನು ಅನುಮೋದಿಸಿ, ಅವುಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕಿದ್ದು, ಈ ನಿಟ್ಟಿನಲ್ಲಿ ಸಭೆ ಕರೆದು ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ. ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕೆಳಕಂಡ ಪ್ರಮುಖ ನಿರ್ಣಯಗಳನ್ನು ತಕ್ಷಣ ಕಾರ್ಯಗತಗೊಳಿಸುವ ಸಂಬಂಧ ತಕ್ಷಣ ತಮ್ಮ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಎಲ್ಲರನ್ನು ಆಹ್ವಾನಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸಮ್ಮೇಳನಾಧ್ಯಕ್ಷರಾಗಿದ್ದ ಗೊ.ರು.ಚನ್ನಬಸಪ್ಪ ಸಮ್ಮುಖ ಕೈಗೊಂಡಿದ್ದ ಪ್ರಮುಖ ನಿರ್ಣಯಗಳು
1. ಕನ್ನಡ ಭಾಷಾ ಅಭಿವೃದ್ಧಿ ಅಧಿನಿಯಮ-2022 ಅನ್ನು ರಾಜ್ಯದಲ್ಲಿ ಸಮಗ್ರವಾಗಿ ಜಾರಿಗೆ ತರಲು ಒತ್ತಾಯಿಸುವುದು.
2. ಸರ್ಕಾರಿ ಕನ್ನಡ ಶಾಲೆಗಳ ಸುಧಾರಣೆ: ಸರ್ಕಾರಿ ಕನ್ನಡ ಶಾಲೆಗಳಿಗೆ ಕಟ್ಟಡ, ವಾಚನಾಲಯ ಸೇರಿ ಮೂಲಸೌಕರ್ಯಗಳನ್ನು ಕಲ್ಪಿಸಬೇಕು.
3. ಶಿಕ್ಷಕರ ಹುದ್ದೆ ಭರ್ತಿ: ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದು.
4.ಸರೋಜಿನಿ ಮಹಿಷಿ ವರದಿಯನ್ನು ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸುವುದು. ಕನ್ನಡಿಗರ ಉದ್ಯೋಗಕ್ಕೆ ತಡೆಯಾಗಿ ನ್ಯಾಯಾಲಯದಲ್ಲಿ ಬಾಕಿಯಿರುವ ಕೇಸ್‌ಗಳನ್ನು ಸರ್ಕಾರ ಎದುರಿಸುವುದು.
5. ಧಾರವಾಡದಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಅತಿ ಶೀಘ್ರದಲ್ಲಿ ನಡೆಸಬೇಕು.
6. ರಾಷ್ಟ್ರಕವಿ ಪ್ರಶಸ್ತಿ ಘೋಷಣೆ: ರಾಷ್ಟ್ರಕವಿ ಪ್ರಶಸ್ತಿಯನ್ನು ಘೋಷಿಸಬೇಕು.
ಸಿಎಂ, ಡಿಸಿಎಂ ಮತ್ತು ಸಚಿವರು ಈ ಪ್ರಮುಖ ನಿರ್ಣಯಗಳ ಕುರಿತು ಚರ್ಚಿಸಲು ತಕ್ಷಣವೇ ಸಭೆ ಆಯೋಜಿಸಿ ಶೀಘ್ರವಾಗಿ ಕಾರ್ಯಗತಗೊಳಿಸಲು ಆದೇಶ ನೀಡಬೇಕೆಂದು ಈ ಮೂಲಕ ಕೋರುತ್ತಿದ್ದೇನೆ ಎಂದು ದಿನೇಶ್ ಗೂಳಿಗೌಡ ಮನವಿಯಲ್ಲಿ ಕೋರಿದ್ದಾರೆ.


