Menu

ನಾಳೆ ಕನಕೋತ್ಸವಕ್ಕೆ ಚಾಲನೆ, “ಮನರೇಗಾ” ಮಕ್ಕಳಿಗೆ ಚಿತ್ರ ಸ್ಪರ್ಧೆ: ಡಿಕೆ ಶಿವಕುಮಾರ್‌

ಜನವರಿ 28ರಂದು ಬೆಳಗ್ಗೆ 5 ಗಂಟೆಗೆ ಕನಕೋತ್ಸವ ಕಾರ್ಯಕ್ರಮ ಅಧಿಕೃತವಾಗಿ ಆರಂಭವಾಗಲಿದೆ. ಯೋಗ ಗುರು ವಚನಾನಂದ ಸ್ವಾಮೀಜಿ ಅವರು ಆಗಮಿಸುತ್ತಿದ್ದಾರೆ.”ಮನರೇಗಾ”  ಯೋಜನೆ ವಿಷಯದಲ್ಲಿ ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಂಡಿದ್ದೇವೆ. ಜನಪದ, ದೇಶಭಕ್ತಿ ಗೀತೆ, ಸಿನಿಮಾ ಗೀತೆಗಳ ಜಿಲ್ಲಾ ಮಟ್ಟದ ಸ್ಪರ್ಧೆ ಏರ್ಪಡಿಸಲಾಗುವುದು. 30ರಂದು ನಂತರ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ. ನಂತರ ರಘು ದೀಕ್ಷಿತ್ ಹಾಗೂ ಸಂಚಿತ್ ಹೆಗಡೆ ಅವರ ತಂಡಗಳಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಕನಕಪುರದಲ್ಲಿ ನಡೆಯುವ ಕನಕೋತ್ಸವದ ಪೂರ್ವಭಾವಿ ತಯಾರಿ ಪರಿಶೀಲಿಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಭಾರತ ದೇಶದ ಶಕ್ತಿಯೇ ನಮ್ಮ ಸಂಸ್ಕೃತಿ. ಈ ಸಂಸ್ಕೃತಿಯೇ ನಮಗೆ ಸ್ಪೂರ್ತಿ. ನಮ್ಮ ಕನಕೋತ್ಸವ ಅನೇಕ ಜನಪ್ರತಿನಿಧಿಗಳಿಗೂ ಸ್ಪೂರ್ತಿಯಾಗಿದೆ. ಏಕೆಂದರೆ ನಮ್ಮ ಈ ಕಾರ್ಯಕ್ರಮ ನೋಡಿ ಅವರ ಕ್ಷೇತ್ರಗಳಲ್ಲೂ ಇದನ್ನು ಅನುಕರಣೆ ಮಾಡಿದ್ದಾರೆ” ಎಂದರು.

ಮೂರು ತಿಂಗಳಿಂದ ಈ ಕಾರ್ಯಕ್ರಮಕ್ಕೆ ತಯಾರಿ ನಡೆದಿದ್ದು ಅನೇಕ ಸ್ಪರ್ಧೆಗಳು ಆಯೋಜಿಸಲಾಗಿದೆ. 28ರಂದು ಕನಕಪುರ ಪಟ್ಟಣದಲ್ಲಿ ರಂಗೋಲಿ ಸ್ಪರ್ಧೆ ನಡೆಯಲಿದೆ. ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಸ್ಪರ್ಧೆಗಳು ನಡೆದಿದ್ದು, 57 ಸಾವಿರ ಮಹಿಳೆಯರು ಭಾಗವಹಿಸಿದ್ದಾರೆ. ಪಕ್ಷ ಬೇಧ ಮರೆತು ಮನೆಗೈದು ಗ್ಯಾರಂಟಿ ಮನೆಗೊಂದು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು. ಯೋಜನೆ ಅನುಷ್ಠಾನದಲ್ಲಿ ನಮ್ಮ ತಾಲೂಕು ಇಡೀ ದೇಶದಲ್ಲಿ ಅಗ್ರಸ್ಥಾನ ಪಡೆದಿದೆ ಎಂದು ಹೇಳಿದರು.

ಕನಕೋತ್ಸವದಂದು ಕಲಾ ತಂಡಗಳೊಂದಿಗೆ ಎಲ್ಲಾ ಗ್ರಾಮ ದೇವತೆಗಳ ಮೆರವಣಿಗೆ ನಡೆಯಲಿದೆ. 250 ಗ್ರಾಮ ದೇವತೆಗಳು ಇಲ್ಲಿಗೆ ಆಗಮಿಸಲಿವೆ.  ಜ.31ರಂದು ಪ್ರತಿಭಾ ಪುರಸ್ಕಾರ ಇದ್ದು, ಒಟ್ಟು 8700 ವಿದ್ಯಾರ್ಥಿಗಳಿಗೆ (ಕಳೆದ ಎರಡು ವರ್ಷಗಳನ್ನು ಸೇರಿಸಿ) ಪುರಸ್ಕಾರ ಮಾಡಲಾಗುವುದು. ಅಂದು ಸಂಜೆ ವಿಜಯ್ ಪ್ರಕಾಶ್ ಅವರ ತಂಡದಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಫೆ. 1ರಂದು ಮೆಹಂದಿ ಸ್ಪರ್ಧೆ ಇದೆ. ಕನಕೋತ್ಸವ ರಿಲ್ ಹಬ್ಬ ನಡೆಯಲಿದೆ. ಚಂದನ್ ಶೆಟ್ಟಿ, ನವೀನ್ ಸಜ್ಜು ಹಾಗೂ ಆಲ್ ಓಕೆ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಸಲಿದೆ. ಕುಸ್ತಿ, ಚೆಸ್, ಪುರುಷರ ದೇಹಧಾಡ್ಯ ಸ್ಪರ್ಧೆ, ಟೆನಿಸ್, ಕಬಡ್ಡಿ ಖೋಖೊ, ಬಾಸ್ಕೆಟ್ ಬಾಲ್ ಕ್ರೀಡೆಗಳು 28ರಿಂದ ಆರಂಭವಾಗಲಿವೆ. ಜೊತೆಗೆ ಪ್ರತಿನಿತ್ಯ ವಿಜ್ಞಾನ ಮೇಳ, ಫಲಪುಷ್ಪ ಪ್ರದರ್ಶನ ಇರಲಿದೆ ಎಂದು ವಿವರಿಸಿದರು.

ರಂಗೋಲಿ ಸ್ಪರ್ಧೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮೂಡಿದ ರಂಗೋಲಿ ನೋಡಿ ಹೇಗನಿಸಿತು ಎಂದು ಕೇಳಿದಾಗ, ನಮ್ಮ ಮನಸ್ಸಲ್ಲಿ ಇಲ್ಲದ ವಿಚಾರಗಳು ಅಲ್ಲಿ ರಂಗೋಲಿ ಮೂಲಕ ಮೂಡಿದ್ದವು. ಅವರ ಬದುಕಿನಲ್ಲಿ ಗ್ಯಾರಂಟಿ ಎಷ್ಟು ಬದಲಾವಣೆ ತಂದಿದೆ ಎಂದು ಅರಿವಾಯಿತು.  ಇದೇ ಕಾರಣಕ್ಕೆ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷರನ್ನು ಕರೆಸಿ, ನಮ್ಮ ಈ ಪರಿಕಲ್ಪನೆ ರಾಜ್ಯದ ಇತರೆ ಭಾಗಗಳಿಗೂ ತಲುಪಬೇಕು. 28ರ ಕಾರ್ಯಕ್ರಮಕ್ಕೆ ಎಲ್ಲರಿಗೂ ನಾನೇ ಖುದ್ದಾಗಿ ಆಹ್ವಾನ ನೀಡುವೆ ಎಂದು ತಿಳಿಸಿದರು.

ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನು ಗುರುತಿಸಲು ಕನಕೋತ್ಸವ ದೊಡ್ಡ ವೇದಿಕೆ. ಸಾಹಿತ್ಯ, ಶೈಕ್ಷಣಿಕ ಕ್ರೀಡೆ, ವೃತ್ತಿ ಬದುಕನ್ನು ನಾವು ಗುರುತಿಸಿದ್ದೇವೆ. ಈ ಉತ್ಸವಕ್ಕೆ ತನ್ನದೇ ಆದ ಇತಿಹಾಸ ಹೊಂದಿದೆ. ಹಬ್ಬಗಳು ಇದ್ದ ಕಡೆ ಸಂಸ್ಕೃತಿ ಇರುತ್ತದೆ, ಸಂಸ್ಕೃತಿ ಇದ್ದ ಕಡೆ ಸರಸ್ವತಿ ಇರುತ್ತಾಳೆ. ಸರಸ್ವತಿ ಇದ್ದ ಕಡೆ ಕಲೆ ಇರುತ್ತದೆ. ಕಲೆ ಇದ್ದ ಕಡೆ ಬೆಲೆ ಇರುತ್ತದೆ. ಮನೆಗೈದು ಗ್ಯಾರಂಟಿ ಮನೆಗೊಂದು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳೆಯರ ಉತ್ಸಾಹ, ಭಾವನೆ, ಕಲ್ಪನೆಗೆ ಮಾಧ್ಯಮಗಳ ಕ್ಯಾಮೆರಾಗಳೇ ಸಾಕ್ಷಿ ಎಂದು ಡಿಸಿಎಂ  ಹೇಳಿದರು.

Related Posts

Leave a Reply

Your email address will not be published. Required fields are marked *