ಲಕ್ನೋ: ಒಂದು ನಿಮಿಷದಲ್ಲಿ 700 ಬುಲೆಟ್ ಸಿಡಿಯುವ `ಖಾಲಾಶ್ತಿಕೋವ್’ ಸರಣಿಯ ಎಕೆ-203 ರೈಫಲ್ ಭಾರತೀಯ ಸೇನೆಗೆ ಶೀಘ್ರವೇ ಸೇರ್ಪಡೆಗೊಳ್ಳಲಿದೆ.
ಉತ್ತರ ಪ್ರದೇಶದ ಅಮೇಥಿಯಲ್ಲಿ 800 ಮೀಟರ್ ವ್ಯಾಪ್ತಿಯಲ್ಲಿ 1 ನಿಮಿಷದಲ್ಲಿ 700 ಬುಲೆಟ್ ಸಿಡಿಯುವ ಈ ರೈಫಲ್ ಅನ್ನು ಭಾರತೀಯ ಸೇನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ಪರೀಕ್ಷೆಗೊಳಪಡಿಸಲಿದೆ.
ಇಂಡೋ-ರಷ್ಯಾನ್ ರೈಫಲ್ಸ್ ಪ್ರವೇಟ್ ಲಿಮಿಟೆಡ್ ಕಂಪನಿ (IRRPL) ಎಕೆ-203 ರೈಫಲ್ ಅಭಿವೃದ್ಧಿಪಡಿಸಿದ್ದು, ಇದನ್ನು ಭಾರತದಲ್ಲಿ ಶೇರ್’ ಎಂದು ಹೆಸರಿಡಲಾಗಿದೆ. ಕಂಪನಿಯು ಅಭಿವೃದ್ಧಿಪಡಿಸಿದ ಎಕೆ-203 ರೈಫಲ್ ಪರೀಕ್ಷೆಗೊಳಪಡಿಸಿದ ನಂತರ ಗ್ರೀನ್ ಸಿಗ್ನಲ್ ನೀಡಿದ ಕೂಡಲೇ ಭಾರತೀಯ ಸೇನೆಗೆ ಇದು ಸೇರ್ಪಡೆಯಾಗಲಿದೆ.
ಈಗಾಗಲೇ ಭಾರತೀಯ ಸೇನೆಗೆ ಈ ಎಕೆ-203 ರೈಫಲ್ ಪೂರೈಕೆ ಮಾಡಲು 5200 ಕೋಟಿ ರೂ. ಒಪ್ಪಂದ ಮಾಡಿಕೊಳ್ಳಲಾಗಿದ್ದು, 6 ಲಕ್ಷ ರೈಫಲ್ ಗಳು ಭಾರತೀಯ ಸೇನೆಗೆ ಹಸ್ತಾಂತರಿಸಬೇಕಾಗಿದೆ.
IRRPL ಮುಖ್ಯಸ್ಥ ಮೇಜರ್ ಜನರಲ್ ಎಸ್ ಕೆ ಶರ್ಮ ಮಾತನಾಡಿ, ಈಗಾಗಲೇ 48,000 ರೈಫಲ್ ಗಳನ್ನು ಪೂರೈಸಲಾಗಿದೆ. ಮುಂದಿನ ಎರಡು-ಮೂರು ವಾರಗಳಲ್ಲಿ 7000 ರೈಫಲ್ ಪೂರೈಸಲಾಗುವುದು. ವರ್ಷಾಂತ್ಯದಲ್ಲಿ 15 ಸಾವಿರ ರೈಫಲ್ಸ್ ಹಸ್ತಾಂತರಿಸಲಾಗುವುದು. 2030ರ ವೇಳೆಗೆ ಗುರಿ ನೀಡಲಾದ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುವುದು ಎಂದರು.
ಏನಿದು ಎಕೆ-203 ರೈಫಲ್ಸ್?
ಎಕೆ 47, ಎಕೆ 56 ಸರಣಿಯ ರೈಫಲ್ ವಿಭಾಗಕ್ಕೆ ಎಕೆ-203 ಸೇರಿದ್ದರೂ ಇದು ಸಾಕಷ್ಟು ಅಭಿವೃದ್ಧಿಪಡಿಸಿದ ರೈಫಲ್ ಆಗಿದೆ. ಇದು ಯೋಧರ ಪಡೆಗಳ ಮುಖಾಮುಖಿ ಯುದ್ಧದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಕೆಲಸ ಮಾಡಲಿದೆ. ಖಲಾಶ್ತಿಕೋವ್ ಸರಣಿಯಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದೆ.
ಭಾರತೀಯ ಸೇನೆ ಮೂರು ದಶಕಗಳಿಂದ ಇರುವ ಸಣ್ಣ ಶಸ್ತ್ರಾಸ್ತ್ರ ವ್ಯವಸ್ಥೆಯಲ್ಲಿ ಇದು ದೊಡ್ಡ ಬದಲಾವಣೆ ತರಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಚಟುವಟಿಕೆ ಹತ್ತಿಕ್ಕಲು ಹಾಗೂ ಈಶಾನ್ಯ ರಾಜ್ಯಗಳ ಗಲಭೆ ನಿಯಂತ್ರಿಸಲು ಇದು ನೆರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಪ್ರಸ್ತುತ ಯೋಧರು ಬಳಸುತ್ತಿರುವ 7.62×30 ಎಂಎಂ ಕಾರ್ಡಿಯೇಜ್ ಬದಲು 5.56x 39 ಎಂಎಂ ಸೇರಲಿವೆ. ಒಂದು ರೈಫಲ್ ಗೆ ಒಂದು ಅಥವಾ ಎರಡು ಕಾರ್ಟಿಯೇಜ್ ಸೇರಿಸಬಹುದು. ಆದರೆ ಇದರಲ್ಲಿ ಒಂದೇ ಬಾರಿಗೆ 30 ಕಾರ್ಟಿಯೇಜ್ (ಗುಂಡು ತುಂಬಿದ ಬಾಕ್ಸ್) ಸೇರಿಸಬಹುದಾಗಿದೆ. ಎಕೆ 203 ಪ್ರಮುಖ ಅಸ್ತ್ರವಾಗಲಿದೆ. ಇದರ ತೂಕ 3.8 ರಿಂದ 4.15 ಕೆಜಿ ಆಗಿದೆ.