Menu

ವಿವಿಗಳ ನಕಲಿ ಅಂಕಪಟ್ಟಿ ಜಾಲ ಬೇಧಿಸಿ ಪ್ರಮುಖ ಆರೋಪಿಯ ಬಂಧಿಸಿದ ಕಲಬುರಗಿ ಪೊಲೀಸ್‌

ಕಲಬುರಗಿ ನಗರ ಪೊಲೀಸರು ದೇಶದ ವಿವಿಧ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿದ್ದಾರೆ.

ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ದೆಹಲಿ ಮೂಲದ ರಾಜೀವ್ ಸಿಂಗ್ ಅರೋರಾ ಎಂಬ ಆರೋಪಿಯನ್ನು ಬಂಧಿಸಿ, ರಾಜ್ಯಕ್ಕೆ ಸರಬರಾಜು ಆಗುತ್ತಿದ್ದ ನಕಲಿ ಅಂಕಪಟ್ಟಿಗಳನ್ನು ವಶಕ್ಕೆ ಪಡೆದಿದ್ದಾರೆ.

28 ವಿಶ್ವವಿದ್ಯಾಲಯಗಳ 522 ನಕಲಿ ಮಾರ್ಕ್ಸ್ ಕಾರ್ಡ್, 1,626 ಖಾಲಿ ಮಾರ್ಕ್ಸ್ ಕಾರ್ಡ್, 403 ಹೋಲೊಗ್ರಾಮ್, 122 ಸೀಲ್, 80 ಬ್ಯಾಂಕ್ ಪಾಸ್‌ಬುಕ್‌, 123 ನಕಲಿ ಐಡಿ ಕಾರ್ಡ್, 32 ಮೊಬೈಲ್ ಫೋನ್, ಲ್ಯಾಪ್‌ಟಾಪ್, ಪೇಮೆಂಟ್‌ಗಾಗಿ ಬಳಸುತ್ತಿದ್ದ ಸ್ವೈಪಿಂಗ್ ಮಷೀನ್‌ ಸೇರಿ 1,20,000 ರೂ. ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಮಾಹಿತಿ ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆನ್‌ ಪೊಲೀಸ್ ಠಾಣೆಯಲ್ಲಿ ನಕಲಿ ಅಂಕಪಟ್ಟಿ ಮಾರಾಟದ ಬಗ್ಗೆ ದೂರು ದಾಖಲಾಗಿತ್ತು. ನಗರದ ಏಷ್ಯನ್‌ ಮಾಲ್‌ನಲ್ಲಿ ʻಐ ಫಾರ್ ಯು ಗ್ಲ್ಯಾಮ್​​​ ಚಾಯಿಸ್ʼ ಹೆಸರಿನ ಬಟ್ಟೆ ಅಂಗಡಿಯಲ್ಲಿ ಎಲೆಜೆನ್ಸ್​​​​​​​​​​​ ಟೆಕ್ನಾಲಜಿ ಮತ್ತು ಪ್ಲೇಸ್​​​​​ಮೆಂಟ್​​ ​ಬ್ಯೂರೋ ಎಂಬ ಹೆಸರಲ್ಲಿ ನಕಲಿ ಅಂಕಪಟ್ಟಿ ತಯಾರು ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ತಾರ್​​​ಫೈಲ್​ ನಿವಾಸಿ ಮೊಹ್ಮದ್​​​ ಖಾನ್​​​​​ ನನ್ನು ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಎಂಬ ಆರೋಪದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಜಾಲವನ್ನೇ ಪತ್ತೆ ಮಾಡಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ ಎಂದರು.

ನಕಲಿ ಅಂಕಪಟ್ಟಿ ತಯಾರಿಕೆ ಪ್ರಕರಣದಲ್ಲಿ ದಾವಣಗೆರೆಯ ಹರಿಪ್ರಸಾದ್ ಹಾಗೂ ಬೆಂಗಳೂರಿನ ಜಗದೀಶ್ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ಪ್ರಮುಖ ಆರೋಪಿ ದೆಹಲಿಯ ರಾಜೀವ್​​​ ಸಿಂಗ್​ ಅರೋರಾನನ್ನು ಪತ್ತೆ ಹಚ್ಚಿ, ದೆಹಲಿಯಲ್ಲಿ ಬಂಧಿಸಿ ಕಲಬುರಗಿಗೆ ಕರೆತರಲಾಗಿದೆ. 15-20 ಸಾವಿರ ರೂ.ಗಳಿಗೆ ಎಸ್‌ಎಸ್‌ ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿಇ, ಬಿ.ಟೆಕ್​ ಇನ್ನಿತರ ಪದವಿಯ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇನ್ನೂ ಯಾರ‍್ಯಾರು ಭಾಗಿಯಾಗಿದ್ದಾರೆ ಎಂದು ತನಿಖೆ ನಡೆಸಲಾಗುತ್ತಿದೆ. ಯಾರ‍್ಯಾರು ಅಂಕಪಟ್ಟಿ ಮಾಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ತನಿಖೆ ಮೂಲಕ ಕಲೆ ಹಾಕ ಲಾಗುತ್ತಿದೆ ಎಂದು ಡಾ. ಶರಣಪ್ಪ ತಿಳಿಸಿದರು.

ಈ ಜಾಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಶ್ಲಾಘಿಸಿದರು.

Related Posts

Leave a Reply

Your email address will not be published. Required fields are marked *