ಕಲಬುರಗಿಯ ಖಡಕ್ ‘ಜೋಳದ ರೊಟ್ಟಿ’ ಆತ್ಮನಿರ್ಭರದ ಪ್ರತೀಕ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಭಾನುವಾರ ತಮ್ಮ ಮನ್ ಕಿ ಬಾತ್ನ 123ನೇ ಸರಣಿಯಲ್ಲಿ ಮೋದಿಯವರು, ಕಲಬುರಗಿಯಲ್ಲಿ ರೊಟ್ಟಿ ತಟ್ಟುವ ಮಹಿಳೆಯರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಹಿಳಾ ಸ್ವಾವಲಂಬನೆ ಭಾರತದ ಅಭಿವೃದ್ಧಿಯ ಹೊಸ ಮಂತ್ರವಾಗಿದೆ. ಮಹಿಳೆ ತಾಯಿ, ಸಹೋದರಿ, ಮಗಳಾಗಿ ಇಡೀ ಸಮಾಜಕ್ಕೆ ಹೊಸ ದಿಕ್ಕು ತೋರಿಸು ತ್ತಿದ್ದಾಳೆ. ಕಲಬುರಗಿ ಮಹಿಳೆಯರು ಆತ್ಮನಿರ್ಭರ ಅಭಿಯಾನದಡಿ ಜೋಳದ ರೊಟ್ಟಿಯನ್ನು ಒಂದು ಬ್ರ್ಯಾಂಡ್ ಆಗಿ ರೂಪಿಸಿದ್ದಾರೆ ಎಂದು ಹೇಳಿದ್ದಾರೆ.
ಕಲಬುರಗಿ ಮಹಿಳೆಯರು ಸ್ವಸಹಾಯ ಸಂಘದ ಮೂಲಕ ಪ್ರತಿನಿತ್ಯ 3 ಸಾವಿರ ರೊಟ್ಟಿ ತಯಾರಿಸುತ್ತಾರೆ. ಈ ರೊಟ್ಟಿ ಕೇವಲ ಗ್ರಾಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ವಿಶೇಷ ಮಳಿಗೆ ತೆರೆದಿದ್ದು, ಆನ್ಲೈನ್ ಮೂಲಕ ಆರ್ಡರ್ ಬರುತ್ತವೆ. ಇದು ಮಹಿಳೆಯರ ಸಾಧನೆಯಾಗಿದೆ. ಇದು ಆತ್ಮನಿರ್ಭರದ ಪ್ರತೀಕವಾಗಿದೆ ಎಂದಿದ್ದಾರೆ.