ಬ್ಯಾಂಕ್‌ಗಳನ್ನೇ ಹಾಟ್ ಸ್ಪಾಟ್ ಆಗಿಸಿಕೊಂಡು ವೃದ್ಧರನ್ನೇ ಟಾರ್ಗೆಟ್ ಮಾಡಿಕೊಂಡು ಹಣ ದೋಚುವ ಮಹಿಳೆಯರ ಗುಂಪು ತುಮಕೂರಿನಲ್ಲೂ ಕಾರ್ಯಾಚರಿಸುತ್ತಿದ್ದು, ಪೊಲೀಸರು ಗ್ಯಾಂಗ್‌ನ ಆರು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಧ್ಯಪ್ರದೇಶದ ಕಾಡಿಯೂ ಎಂಬ ಊರಿನ ಈ ಮಹಿಳಾ ಕಳವು ಗ್ಯಾಂಗ್ ಎಷ್ಟೇ ಜಾಗರೂಕರಾಗಿದ್ದರೂ ಜನರನ್ನು ಯಾಮಾರಿಸಿ ಹಣ ಎಗರಿಸಿ ಪರಾರಿಯಾಗುತ್ತದೆ. ಇತ್ತೀಚೆಗೆ ನಿವೃತ್ತ ಶಿಕ್ಷಕ ಗಂಗಪ್ಪ ಎಂಬವರು ಬ್ಯಾಂಕ್‌ಗೆ ಹಣ ಕಟ್ಟುವಾಗ 1 ಲಕ್ಷದ 75 ಸಾವಿರ ರೂಪಾಯಿ ಎಗರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ಸಂಬಂಧ ಮಧುಗಿರಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರು ಕಳ್ಳ ಮಹಿಳೆಯರನ್ನು ಬಂಧಿಸಿದ್ದಾರೆ. ದೀಪಮಾಲ, ಫರೊತಾ ಸಿಸೋಡಿಯಾ, ರೇಖಾಬಾಯಿ, ಪ್ರದೀಪ್ ಸಿಸೊಡಿಯಾ, ಮಮತ, ಮಲಬಾಯಿ ಬಂಧಿತರು.
ಮಧ್ಯಪ್ರದೇಶದ ಕಾಡಿಯಾ ಊರಿನ ಈ ಕಳ್ಳರ ಗ್ಯಾಂಗ್ ರಾಜ್ಯ ಬಿಟ್ಟು ಊರೂರು ಅಲೆದು ಬ್ಯಾಂಕ್ ಗಳಲ್ಲಿ ಹಣ ತುಂಬವವರನ್ನೇ ಟಾರ್ಗೆಟ್ ಮಾಡಿ ದೋಚುತ್ತದೆ. ಗ್ಯಾಂಗ್ ನ ಪುರುಷ ಸದಸ್ಯರು ಕಾರು ಚಾಲನೆ ಮಾತ್ರ ಮಾಡುತ್ತಾರೆ, ಹಣದ ದೋಚುವುದರಲ್ಲಿ ಭಾಗಿಯಾಗುವುದಿಲ್ಲ. ಈ ಗ್ಯಾಂಗ್ ಕರ್ನಾಟಕ ಸೇರಿದಂತೆ ಆಂಧ್ರದಲ್ಲಿ 9 ಕಳವು ಕೃತ್ಯ ಮಾಡಿರುವುದು ದಾಖಲಾಗಿದೆ.