ಮೈಸೂರಿನಲ್ಲಿ ಕಬಿನಿ ಹಾಗೂ ತಾರಕ ಜಲಾಶಯಗಳು ಭರ್ತಿಯಾಗಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಕೇರಳದ ವಯನಾಡುವಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ, ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಹೊರ ಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರಿಯಕೆಯಿಂದ ಇರಬೇಕಾಗಿದೆ.
ಕಬಿನಿ ಜಲಾಶಯದಿಂದ 10,000ರಿಂದ 15,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುವುದು. ಈ ಪ್ರಮಾಣವು ಹೆಚ್ಚಾಗುವ ಸಾಧ್ಯತೆಯೂ ಇದೆ. ಕಬಿನಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ತೀರಗಳಲ್ಲಿ ವಾಸಿಸುತ್ತಿರುವ ಜನರು ಆಸ್ತಿಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಪ್ರಕಟಣೆ ತಿಳಿಸಿದೆ.
ಹೆಬ್ಬಳ ಗ್ರಾಮದಲ್ಲಿರುವ ತಾರಕ ಜಲಾನಯನ ಪ್ರದೇಶದಲ್ಲಿಯೂ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಬರುವ ಒಳಹರಿವು ಹೆಚ್ಚಾಗಿ, ಜಲಾಶಯವು ಗರಿಷ್ಠಮಟ್ಟ ತಲುಪುವ ಹಂತದಲ್ಲಿದೆ. ಯಾವುದೇ ಸಮಯದಲ್ಲಿ ಕ್ರೆಸ್ಟ್ ಗೇಟ್ಗಳ ಮೂಲಕ ನದಿಗೆ ನೀರನ್ನು ಹೊರಬಿಡಬಹುದಾಗಿದೆ. ತಾರಕ ನದಿ ದಂಡೆಯ ಗ್ರಾಮದ ವಾಸಿಗಳು ಹಾಗೂ ನದಿ ಪಾತ್ರದ ತಗ್ಗುಪ್ರದೇಶದಲ್ಲಿರುವ ಆಸ್ತಿ ಪಾಸ್ತಿ, ಜನ ಜಾನುವಾರು ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕು. ಎಲ್ಲರೂ ಸುರಕ್ಷಿತ ಸ್ಥಳಗಳಿಗೆ ತೆರಳಲು ತಿಳಿಸಲಾಗಿದೆ ಎಂದು ಜಲಾಶಯಗಳ ಇಂಜಿನಿಯರ್ಗಳು ಪ್ರತ್ಯೇಕವಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ ಶಾಲೆ, ಪ್ರೌಢಶಾಲೆ, ಪಿಯು ಕಾಜೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಮಳೆಯ ಆರ್ಭಟವಿದ್ದು, 5 ತಾಲೂಕುಗಳ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ.