Menu

ಎಚ್ಎಂಟಿಗೆ ಮೊದಲು ನ್ಯಾಯ ಕೊಡಿಸಲಿ: ಹೆಚ್.ಡಿ. ಕುಮಾರಸ್ವಾಮಿಗೆ ಡಿಕೆ ಸುರೇಶ್ ತಿರುಗೇಟು

dk suresh

ಬೆಂಗಳೂರು: “ಕುಮಾರಸ್ವಾಮಿ  ಕೇವಲವಾಗಿ ಮಾತನಾಡುವುದನ್ನು ಬಿಟ್ಟು ರಾಜ್ಯದ ಹಿತ ಕಾಪಾಡಲಿ, ಎಚ್ಎಂಟಿಯವರಿಗೆ ನ್ಯಾಯ ಕೊಡಿಸಲಿ” ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿರುಗೇಟು ನೀಡಿದರು.

ಸದಾಶಿವನಗರ ನಿವಾಸದಲ್ಲಿ ಸುರೇಶ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.

ಬಳ್ಳಾರಿ ಗಲಭೆ ವಿಚಾರದಿಂದ ಡಿ.ಕೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿ ನಡುವೆ ರಾಜಕೀಯ ಅನುಭವದ ವಾಕ್ಸಮರ ನಡೆಯುತ್ತಿರುವ ಬಗ್ಗೆ ಕೇಳಿದಾಗ, “ಸುಮ್ಮನೆ ಇಲ್ಲಸಲ್ಲದ್ದು ಯಾಕೆ ಹೇಳುತ್ತೀರಿ. ಮಂಡ್ಯ ಶಾಸಕ ಗಣಿಗ ರವಿ ಅವರು 100 ಎಕರೆ ಜಾಗವನ್ನು ನಿರ್ಧರಿಸಿದ್ದಾರಂತೆ. ಅವರಿಗೆ ಏನು ಅಧಿಕಾರ ಇದೆ ಎಂದು ಕುಮಾರಸ್ವಾಮಿ ಅವರು ಕೇಳುತ್ತಾರೆ. ಅವರಿಗೆ ಅಧಿಕಾರ ಇದೆಯೋ ಇಲ್ಲವೋ, ಸರ್ಕಾರಿ ಜಾಗ ಎಲ್ಲಿದೆ ಎಂದು ಅವರು ಗುರುತಿಸಿದ್ದಾರೆ. ಅಲ್ಲಿಯ ಜನರಿಗೆ ಉದ್ಯೋಗ ಕೊಡಿಸಲು ನಿಮ್ಮ ಇಲಾಖೆಯಿಂದ ಏನು ಮಾಡುತ್ತೀರಿ ಅದನ್ನು ಹೇಳಿ. ಹೆಚ್ಎಂಟಿ ಉದ್ಧಾರ ಮಾಡುವುದಾಗಿ ಮಾತನಾಡುತ್ತಿದ್ದರಲ್ಲ, ಆ ಕೆಲಸ ಮಾಡಲಿ” ಎಂದು ತಿರುಗೇಟು ನೀಡಿದರು.

ಸಿಡಿ ಫ್ಯಾಕ್ಟರಿ ಇರುವುದು, ತಯಾರಾಗಿದ್ದು ಹಾಸನದ ಹೊಳೆನರಸಿಪುರದಲ್ಲಿಯಲ್ಲವೇ?

ಜೆಡಿಎಸ್ ಎಕ್ಸ್ ಖಾತೆಯಲ್ಲಿ ಸಿಡಿ ಫ್ಯಾಕ್ಟರಿ ವಿಚಾರ ಪ್ರಸ್ತಾಪಿಸಿ ಕೀಳು ಭಾಷೆ ಬಳಸಿದ್ದಾರೆ ಎಂದು ಕೇಳಿದಾಗ, “ಜೆಡಿಎಸ್ ನವರಿಗೆ ಕೆಲಸ ಇಲ್ಲ, ಉದ್ಯೋಗ ಇಲ್ಲ. ಸಿಡಿ ಫ್ಯಾಕ್ಟರಿಗಳು ಇದ್ದದ್ದು ಹಾಸನದ ಹೊಳೆನರಸಿಪುರದಲ್ಲಿ. ಹೊಳೆನರಸಿಪುರ ಹಾಗೂ ಪದ್ಮನಾಭನಗರಕ್ಕೆ ಹೋಗಿ ಎಲ್ಲಿ ಫ್ಯಾಕ್ಟರಿ ಇತ್ತು ಎಂದು ಕೇಳಿಕೊಳ್ಳಲಿ. ಯಾರು ಬೇಡ ಎಂದರು? ಯಾರು ಸಿಡಿ ಸೃಷ್ಟಿ ಮಾಡುತ್ತಿದ್ದರು ಎಂದು ಈಗ ಎಲ್ಲರಿಗೂ ಗೊತ್ತಿದೆಯಲ್ಲ. ಹಾಸನಕ್ಕಿಂತ ಉದಾಹರಣೆ ಬೇಕಾ? ಇಡೀ ದೇಶದಲ್ಲಿ ಅತ್ಯಂತ ಹೀನಾಯ ಕೃತ್ಯ ಯಾವುದಾದರೂ ಇದ್ದರೆ ಅದು ಹಾಸನದಲ್ಲಿ ನಡೆದ ದುರ್ಘಟನೆ. ಇದರ ಬಗ್ಗೆ ಒಂದು ವಿಷಾದ ವ್ಯಕ್ತಪಡಿಸಲಾದ ಜೆಡಿಎಸ್ ಮುಖಂಡರು ಬೇರೆ ವಿಚಾರವಾಗಿ ಮಾತನಾಡುವ ನೈತಿಕತೆ ಎಲ್ಲಿದೆ?” ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಮೊದಲು ರಾಜಿನಾಮೆ ನೀಡಲಿ, ಆಮೇಲೆ ರಾಜ್ಯ ರಾಜಕಾರಣಕ್ಕೆ ಬರಲಿ

ಕುಮಾರಸ್ವಾಮಿ ಅವರು ರಾಜ್ಯ ರಾಜಕೀಯಕ್ಕೆ ಮರಳುತ್ತಿದ್ದಾರೆ. ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾಡಿ ಈಸ್ ಹೋಂ ಎಂದು ವಿಡಿಯೋ ಮಾಡಿದ್ದಾರೆ ಎಂದು ಕೇಳಿದಾಗ, “ಯಾರು ಡ್ಯಾಡಿ? ಅವರು ಕೇಂದ್ರ ಸಚಿವ ಸ್ಥಾನ ಹಾಗೂ ಸಂಸದ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಬಳಿಕವಷ್ಟೇ ಅಲ್ಲವೇ ಈ ಮಾತು. ಅವರು ರಾಜಿನಾಮೆ ನೀಡಿದ ಬಳಿಕ ರಾಜ್ಯಕ್ಕೆ ಮರಳುತ್ತಾರೆ ಎನ್ನಬಹುದು. ಸಧ್ಯಕ್ಕೆ ದೇಶದ ಆಗುಹೋಗುಗಳ ಬಗ್ಗೆ ಗಮನಹರಿಸುತ್ತಿದ್ದಾರೆ. ಅಲ್ಲಿ ಅವರು ಇರುವುದು ಇಷ್ಟವಿಲ್ಲವೇ?” ಎಂದು ಪ್ರಶ್ನಿಸಿದರು.

ಅವರು ರಾಜ್ಯದ ವಿಚಾರವಾಗಿ ಹೆಚ್ಚು ಟೀಕೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅವರು ಯಾವತ್ತು ದೇಶದ ವಿಚಾರ ಮಾತನಾಡಿದ್ದಾರೆ? ಅವರಿಗೆ ಆರೋಗ್ಯ ಸರಿಯಿಲ್ಲದಾಗ, ಮೂರು ತಿಂಗಳು ದೆಹಲಿಯಲ್ಲಿ ಇದ್ದದ್ದು ಬಿಟ್ಟರೆ ಉಳಿದಂತೆ ಕರ್ನಾಟಕದಲ್ಲೇ ವಾಸ್ತವ್ಯ. ಅಷ್ಟು ಬಿಟ್ಟರೆ ಬೇರೇನಿದೆ” ಎಂದರು.

ಮೋದಿ ಅವರಿಗೆ ಹೆಸರು ಬದಲಿಸುವ ಚಟ

ಮನರೇಗಾ ವಿಚಾರವಾಗಿ ತಾಲ್ಲೂಕು ಮಟ್ಟದಲ್ಲಿ ಪಾದಯಾತ್ರೆ ಮಾಡಲು ನಿರ್ಧರಿಸಲಾಗಿದೆ ಎಂದು ಕೇಳಿದಾಗ, “ಮನರೇಗಾ ಗ್ರಾಮೀಣ ಭಾಗದ ಕಾರ್ಮಿಕರಿಗೆ ಕಾನೂನಾತ್ಮಕವಾಗಿ ಉದ್ಯೋಗದ ಹಕ್ಕನ್ನು ಕಾಂಗ್ರೆಸ್ ಪಕ್ಷ ನೀಡಿತ್ತು. ಮೋದಿ ಅವರ ಸರ್ಕಾರಕ್ಕೆ ಹೆಸರು ಬದಲಿಸುವ ಅಭ್ಯಾಸವಿದೆ. ಈ ಭರದಲ್ಲಿ ಮೋದಿ ಅವರು ಎಲ್ಲಿ ತಮ್ಮ ಹೆಸರನ್ನೇ ಬದಲಿಸಿಕೊಳ್ಳುತ್ತಾರೋ ಎಂಬ ಭಯ ಕಾಡುತ್ತಿದೆ. ಹೆಸರು ಬದಲಾವಣೆ ಮಾಡುವುದು ಅವರ ಚಟ, ಈ ಚಟಕ್ಕೆ ಮದ್ದಿಲ್ಲ. ಅವರು ದೇಶದ ಆರ್ಥಿಕ ಪರಿಸ್ಥಿತಿಯನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ವಿಚಾರವನ್ನು ಮಾಧ್ಯಮಗಳು ಮಾತನಾಡುವುದೇ ಇಲ್ಲ. ಬಿಜೆಪಿ ನಾಯಕರು ಮೋದಿ ಅವರು ಅಧಿಕಾರಕ್ಕೆ ಬಂದರೆ 1 ಡಾಲರ್ ಗೆ 15 ರೂಪಾಯಿ ಮಾಡುತ್ತೇವೆ, ಆದಾಯ ತೆರಿಗೆ ರದ್ದಾಗುತ್ತದೆ ಎಂದು ಹೇಳಿದ್ದರು. ಈ ಬಗ್ಗೆ ನೀವು ಹೇಳುವುದೂ ಇಲ್ಲ, ಕೇಳುವುದೂ ಇಲ್ಲ. ಮನಮೋಹನ್ ಸಿಂಗ್ ಇದ್ದಾಗ ಡಾಲರ್ ಎದುರು ರೂಪಾಯಿ ಮೌಲ್ಯ 52 ರೂ. ಇತ್ತು. ಈಗ 91 ರೂ. ಆಗಿದೆ. ಮನಮೋಹನ್ ಸಿಂಗ್ ಅವರಿದ್ದಾಗ ಸಾಕಷ್ಟು ಟೀಕೆ ಟಿಪ್ಪಣಿ ಮಾಡಿದ್ದರು. ಕಳೆದ 10 ವರ್ಷಗಳಲ್ಲಿ 40 ರೂ. ಕುಸಿದಿದೆ. ಇದಕ್ಕೆ ಕಾರಣ ಯಾರು? ಕಾಂಗ್ರೆಸ್ ಪಕ್ಷವೇ? ಹೀಗಾಗಿ ಅವರು ಹೆಸರು ಬದಲಿಸಿಕೊಂಡರೆ ಆಗ ಹೊಸ ಹೆಸರು ನೀಡಬಹುದು” ಎಂದರು.

ಕೇರಳ- ಕರ್ನಾಟಕ  ಬಾಂಧವ್ಯಕ್ಕೆ ಧಕ್ಕೆಯಾಗದಂತೆ ನಿಯಮ 

ಕೇರಳ ಸರ್ಕಾರದ ಮಲಯಾಳಂ ಭಾಷೆ ಕಡ್ಡಾಯ ಕಾಯ್ದೆ ವಿಚಾರವಾಗಿ ಕೇಳಿದಾಗ, “ಅವರವರ ರಾಜ್ಯದ ಭಾಷೆಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ಸಹಜ. ಕಾಸರಗೋಡು ಕರ್ನಾಟಕದ ಭಾಗ ಎಂಬುದು ನಮ್ಮ ಪ್ರತಿಪಾದನೆ, ಅಲ್ಲಿನ ಕನ್ನಡಿಗರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಆ ಸರ್ಕಾರದ ಕೆಲಸ. ಕೇರಳ ಸರ್ಕಾರ ಒತ್ತಡ ಹೇರುತ್ತಿರುವುದು ಗಡಿ ಭಾಗದಲ್ಲಿ ಉತ್ತಮ ವಾತಾವರಣ ಇರಲು ಸಾಧ್ಯವಿಲ್ಲ. ಕೇರಳ ಹಾಗೂ ಕರ್ನಾಟಕ ಉತ್ತಮ ಬಾಂಧವ್ಯ ಹೊಂದಿದ್ದು, ಇದಕ್ಕೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ” ಎಂದರು.

“ಕಳೆದ ಹತ್ತು ವರ್ಷಗಳಿಂದ ಅವರೇ ಅಧಿಕಾರದಲ್ಲಿದ್ದರು. ಈಗ ಇದನ್ನು ಮಾಡುತ್ತಿದ್ದಾರೆ ಎಂದರೆ ಇದು ಚುನಾವಣೆ ರಾಜಕಾರಣವಷ್ಟೇ. ಕಾಸರಗೋಡಿನಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಅನೇಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮಲೆಯಾಳಂ ಕಲಿಸಬೇಡಿ ಎಂದು ನಾವು ಹೇಳುತ್ತಿಲ್ಲ. ಕನ್ನಡಿಗರಿಗೆ ತೊಂದರೆಯಾಗದ ರೀತಿ ನಿಯಮಗಳಿರಲಿ ಎಂಬುದು ನಮ್ಮ ಒತ್ತಾಯ” ಎಂದು ತಿಳಿಸಿದರು.

ಕೋಗಿಲು ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ್ದ ವೇಣುಗೋಪಾಲ್ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲಿ ಎಂದು ಸಲಹೆ ನೀಡುತ್ತೀರಾ ಎಂದು ಕೇಳಿದಾಗ, “ವೇಣುಗೋಪಾಲ್ ಅಲ್ಲಿ ಸರ್ಕಾರ ನಡೆಸುತ್ತಿದ್ದರೆ ನಾವು ಹೇಳಬಹುದಾಗಿತ್ತು. ಉತ್ತಮ ಬಾಂಧವ್ಯ ಕಾಪಾಡಲು ವೇಣುಗೋಪಾಲ್ ಅವರು ಒತ್ತಾಯ ಮಾಡಬಹುದು” ಎಂದು ತಿಳಿಸಿದರು.

ಆನೆ ತುಳಿತ ಸೇರಿದಂತೆ ಇತರೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವ ಪ್ರಿಯಾಂಕ ಗಾಂಧಿ ಈ ವಿಚಾರದಲ್ಲಿ ಯಾಕೆ ಪ್ರಶ್ನಿಸುತ್ತಿಲ್ಲ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ಬಿಜೆಪಿಯವರಿಗೆ ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ, ಪ್ರಿಯಾಂಕ ಗಾಂಧಿ ಅವರನ್ನು ಕರೆದು ತರಲಿಲ್ಲ ಎಂದರೆ ನಿದ್ದೆ ಬರುವುದಿಲ್ಲ. ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಬಗ್ಗೆ ಅವರ ನಿಲುವುಗಳೇನು ಎಂದು ಟ್ವೀಟ್ ಮಾಡಿರುವವರು ಸ್ಪಷ್ಟೀಕರಣ ನೀಡಲಿ. ಅನಗತ್ಯವಾಗಿ ಪ್ರಿಯಾಂಕ ಗಾಂಧಿ ಅವರನ್ನು ಕರೆತಂದು ರಾಜಕೀಯ ಮಾಡುವುದು ಸರಿಯಲ್ಲ” ಎಂದು ತಿಳಿಸಿದರು.

ನಿನ್ನೆ ರಾಮನಗರ ಶಾಸಕರಾದ ಇಕ್ಬಾಲ್ ಹುಸೇನ್ ನಿಮ್ಮನ್ನು ಭೇಟಿ ಮಾಡಿದ್ದು, ಸಂಕ್ರಾಂತಿ ಬಳಿಕ ದೆಹಲಿಗೆ ಹೋಗಿ ಡಿ.ಕೆ. ಶಿವಕುಮಾರ್ ಸಿಎಂ ಮಾಡುವ ಬಗ್ಗೆ ಚರ್ಚೆ ನಡೆಯಿತೇ ಎಂದು ಕೇಳಿದಾಗ, “ಎಲ್ಲರಿಗೂ ಆಸೆ ಇದೆ. ನನಗೂ ಇದೆ. ನನಗೆ ಆಸೆ ಇಲ್ಲ ಎಂದು ಹೇಳಿದ್ದೇನಾ? ಅವರ ತಾಲ್ಲೂಕಿನಲ್ಲಿ ರಾಮೋತ್ಸವ ಕಾರ್ಯಕ್ರಮ ಮಾಡುತ್ತಿದ್ದು, ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ಇಂದು ಕುಣಿಗಲ್ ನಲ್ಲಿ ಕಾರ್ಯಕ್ರಮವಿದ್ದು, ಅಲ್ಲಿಗೆ ಹೋಗುತ್ತಿದ್ದೇನೆ” ಎಂದರು.

ಸಂಕ್ರಾಂತಿ ಬಳಿಕ ಉತ್ತಮ ಗಳಿಗೆ ಆರಂಭವಾಗುವುದೇ ಎಂದು ಕೇಳಿದಾಗ, “ನೀವು ಗಳಿಗೆ ಮುಹೂರ್ತ ನಿಗದಿ ಮಾಡಿದರೆ ಸರಿಹೋಗುತ್ತದೆ. ನೀವು ಮುಹೂರ್ತ ನಿಗದಿ ಮಾಡುವುದನ್ನು ಕಾಯುತ್ತಿದ್ದೇವೆ” ಎಂದು ಚಟಾಕಿ ಹಾರಿಸಿದರು.

ಶಿವಕುಮಾರ್ ಅವರಿಗೆ ಅಸ್ಸಾಂ ಚುನಾವಣೆ ವೀಕ್ಷಕರಾಗಿ ಜವಾಬ್ದಾರಿ ನೀಡಿರುವ ಬಗ್ಗೆ ಕೇಳಿದಾಗ, “ಚುನಾವಣೆಗಳು ನಡೆಯುವಾಗ ವೀಕ್ಷಕರ ನೇಮಕ ಮಾಡುವುದು ಸಹಜ. ಚುನಾವಣೆ ಪ್ರಕ್ರಿಯೆ ಬಗ್ಗೆ ನಿಯೋಜಿಸಲಾಗಿದ್ದು, ಪಕ್ಷದ ಕೆಲಸ ಅದನ್ನು ಶಿವಕುಮಾರ್ ಅವರು ಮಾಡುತ್ತಾರೆ. ಕೇರಳ ಚುನಾವಣೆಗೆ ಕೆ.ಜೆ. ಜಾರ್ಜ್ ಅವರನ್ನು ನಿಯೋಜಿಸಲಾಗಿದೆ” ಎಂದು ತಿಳಿಸಿದರು.

ಮಾರ್ಚ್ 31ರವರೆಗೆ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಹಿರಿಯ ನಾಯಕರಿದ್ದಾರೆ. ಯಾರು ಯಾವ ಸಲಹೆ ನೀಡುತ್ತಾರೆ ಎಂದು ಕಾದು ನೋಡೋಣ” ಎಂದರು.

Related Posts

Leave a Reply

Your email address will not be published. Required fields are marked *