ನವದೆಹಲಿ: ಕೇಂದ್ರ ಸರಕಾರ ಒಪ್ಪಿದರೆ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ (ಬಿ.ಆರ್. ಗವಾಯಿ) ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ.
ತಮ್ಮ ನಿವೃತ್ತಿ ನಂತರ ಖಾಲಿ ಬೀಳಲಿರುವ ಸಿಜೆಐ ಸ್ಥಾನಕ್ಕೆ ಹಾಕಿ ಸಿಜೆ ನ್ಯಾ. ಸಂಜೀವ್ ಖನ್ನಾ ಅವರು ನ್ಯಾ. ಗವಾಯಿ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರಯಾಗಿರುವ ನ್ಯಾಯಮೂರ್ತಿ ಗವಾಯಿ ಅವರನ್ನು ಮುಂದಿನ ಸಿಜೆಐ ಆಗಿ ನೇಮಿಸಲು ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿದೆ.
ನ್ಯಾಯಮೂರ್ತಿ ಗವಾಯಿ ಮೇ 14, 2025ರಂದು ಸುಪ್ರೀಂ ಕೋರ್ಟ್‌ನ 52ನೇ ಸಿಜೆಐ ಆಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ. ಸಿಜೆಐ ಸಂಜೀವ್ ಖನ್ನಾ ಅವರು ಮೇ 13, 2025ರಂದು ನಿವೃತ್ತಿಯಾಗಲಿದ್ದಾರೆ.
ಸಾಂವಿಧಾನಿಕ ವಿಷಯದಲ್ಲಿ ಎತ್ತಿದ ಕೈ
2019ರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡ ನ್ಯಾ. ಗವಾಯಿ ಅವರು ಹಲವಾರು ಸಾಂವಿಧಾನಿಕ ಪೀಠಗಳ ಭಾಗವಾಗಿದ್ದಾರೆ. 2023ರ ಡಿಸೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದ ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠದ ಭಾಗವಾಗಿದ್ದರು.
ಅವರು ಭಾಗವಹಿಸಿದ ಮತ್ತೊಂದು ಐದು ನ್ಯಾಯಾಧೀಶರ ಪೀಠವು ರಾಜಕೀಯ ಧನಸಹಾಯಕ್ಕಾಗಿ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತು. 2016ರಲ್ಲಿ 1,000 ಮತ್ತು 500 ರೂ. ನೋಟುಗಳನ್ನು ಅಮಾನ್ಯಗೊಳಿಸಿದ ಕೇಂದ್ರದ ನಿರ್ಧಾರಕ್ಕೆ 4:1 ಬಹುಮತದಿಂದ ಅನುಮೋದನೆ ನೀಡಿದ ಸಾಂವಿಧಾನಿಕ ಪೀಠದ ಭಾಗವಾಗಿದ್ದರು.
ನ್ಯಾಯಮೂರ್ತಿ ಗವಾಯಿ 7 ನ್ಯಾಯಾಧೀಶರ ಸಾಂವಿಧಾನಿಕ ಪೀಠದ ಭಾಗವಾಗಿದ್ದರು. ಈ ಪೀಠವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳ ಉನ್ನತಿಗಾಗಿ ಮೀಸಲಾತಿ ನೀಡಲು, ಪರಿಶಿಷ್ಟ ಜಾತಿಗಳಲ್ಲಿ ಉಪ-ವರ್ಗೀಕರಣ ಮಾಡಲು ರಾಜ್ಯಗಳಿಗೆ ಸಾಂವಿಧಾನಿಕ ಅಧಿಕಾರವಿದೆ ಎಂದು 6:1 ಬಹುಮತದಿಂದ ತೀರ್ಪು ನೀಡಿತು.
ಅವರ ನೇತೃತ್ವದ ಪೀಠವು ಮಹತ್ವದ ತೀರ್ಪಿನಲ್ಲಿ, ಪ್ಯಾನ್-ಇಂಡಿಯಾ ಮಾರ್ಗಸೂಚಿಗಳನ್ನು ರೂಪಿಸಿತು. ಯಾವುದೇ ಆಸ್ತಿಯನ್ನು ಪೂರ್ವ ಶೋಕಾಸ್ ನೋಟಿಸ್ ಇಲ್ಲದೆ ನೆಲಸಮ ಮಾಡಬಾರದು ಮತ್ತು ಸಂತ್ರಸ್ತರಿಗೆ ಪ್ರತಿಕ್ರಿಯಿಸಲು 15 ದಿನಗಳ ಕಾಲಾವಕಾಶ ನೀಡಬೇಕು ಎಂದು ಆದೇಶಿಸಿತು.