ತುಮಕೂರಿನಲ್ಲಿ ದಲಿತ ಪತ್ರಕರ್ತ ಜಿ.ಎನ್.ಮಂಜುನಾಥ್ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದಡಿ ಮಾಧ್ಯಮ ವರದಿಗಾರ ಮಂಜುನಾಥ್ ತಾಳಮಕ್ಕಿ ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿ ಪತ್ರಕರ್ತರನ್ನು ತಾಳಮಕ್ಕಿನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪರಿಶಿಷ್ಟ ಜಾತಿಗೆ ಸೇರಿರುವ ಮಾಧ್ಯಮ ವರದಿಗಾರ ಜಿ.ಎನ್.ಮಂಜುನಾಥ್ ಎಂಬವರು ನೀಡಿರುವ ದೂರಿನ ಅನ್ವಯ ತಿಲಕ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ನಡೆದ ಇ.ಡಿ. ದಾಳಿ ನಡೆದಿದ್ದಾಗ ವರದಿ ಮಾಡಲು ತೆರಳಿದ್ದ ವೇಳೆ ನನಗೆ ಮಂಜುನಾಥ್ ತಾಳಮಕ್ಕಿ ಜಾತಿ ನಿಂದನೆ ಮಾಡಿ ಮೈಕ್ನಿಂದ ಥಳಿಸಿದ್ದಾರೆ. “ಏನಲೇ ಬಂದಿದ್ದೀಯಾ, ನೀನೇ ಮಹಾ ಬುದ್ಧಿವಂತ ಅಂದ್ಕೊಂಡಿದ್ದೀಯಾ, ಏನೇ ಮಾಡಿದರೂ ಕೀಳು ಜಾತಿ ಬುದ್ಧಿ ಬಿಡಲ್ಲ, ಮಾದಿಗರ ಬುದ್ಧಿ ಲದ್ದಿ” ಎಂದು ಜಾತಿ ನಿಂದನೆ ಮಾಡಿದ್ದಾರೆ. ಅವರ ವಾಹಿನಿಯ ಲೋಗೋವಿದ್ದ ಮೈಕ್ ನಿಂದ ತಲೆ ಮತ್ತು ಕಿವಿಗೆ ಹಲ್ಲೆ ನಡೆಸಿದ್ದಾರೆ ಎಂದು ಜಿ.ಎನ್.ಮಂಜುನಾಥ್ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಹಲ್ಲೆಯಿಂದ ಜಿ.ಎನ್.ಮಂಜುನಾಥ್ ಅವರ ಕಿವಿ, ಬಲ ಕುತ್ತಿಗೆಗೆ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.