ರಾಂಚಿ: ಸರ್ಕಾರ ಉಳಿಯಲಿ ಅಥವಾ ಹೋಗಲಿ, ಯಾವುದೇ ಸಂದರ್ಭದಲ್ಲೂ ಕೇಂದ್ರದ ಕ್ಷೇತ್ರ ಪುನರ್ವಿಂಗಡಣೆ ಜಾರಿಗೆ ತರಲು ಬಿಡುವುದಿಲ್ಲ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ.
ಜಾರ್ಖಂಡ್ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿಂದು ಕೇಂದ್ರ ಸರ್ಕಾರದ ಉದ್ದೇಶಿತ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆ ಸೇರಿದಂತೆ ಹಲವು ವಿಚಾರಗಳ ಕುರಿತು ಸದನದಲ್ಲಿ ಸೊರೇನ್ ಮಾತನಾಡಿದರು.
ಕ್ಷೇತ್ರ ಪುನರ್ ವಿಂಗಡಣೆಯ ಹಿಂದೆ ಒಂದು ಗುಪ್ತ ಕಾರ್ಯಸೂಚಿ ಇರುವ ಮಾಹಿತಿ ಇದೆ. ಬುಡಕಟ್ಟು ಮತ್ತು ದಲಿತರ ಸೀಟುಗಳನ್ನು ಕಡಿತಗೊಳಿಸುವ ಉದ್ದೇಶ ಎದ್ದು ಕಾಣುತ್ತಿದೆ. ಇದೇ ರೀತಿಯ ಪ್ರಯತ್ನ ಈ ಹಿಂದೆಯೂ ಮಾಡಲಾಗಿತ್ತು.
ಇದನ್ನು ಶಿಬು ಸೊರೇನ್ ಅವರ ನೇತೃತ್ವದಲ್ಲಿ ಅಷ್ಟಕ್ಕೆ ತಡೆಹಿಡಿಯಲಾತಿಯಿತು. ಆದರೆ, ಈ ಬಾರಿ ಕ್ಷೇತ್ರ ಪುನರ್ ವಿಂಗಡಣೆಯ ಪಿತೂರಿಯನ್ನು ದೇಶಾದ್ಯಂತ ಬಹಳ ಚಾಣಾಕ್ಷತನದಿಂದ ರೂಪಿಸಲಾಗುತ್ತಿದೆ.
ನಾವು ಇದರ ಮೇಲೂ ಕಣ್ಣಿಟ್ಟಿದ್ದೇವೆ. ಎಂತಹ ಪರಿಸ್ಥಿತಿ ಬಂದರೂ ಬಲವಾಗಿ ಖಂಡಿಸುತ್ತೇವೆ. ನಮ್ಮ ಸರ್ಕಾರ ಉಳಿಯಲಿ ಅಥವಾ ಹೋಗಲಿ, ನಾವು ಸರ್ಕಾರದಲ್ಲಿದ್ದರೂ ಅಥವಾ ಇಲ್ಲದಿದ್ದರೂ, ಇದರ ವಿರುದ್ಧ ನಾವು ಹೋರಾಡುತ್ತೇವೆ ಎಂದು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬಹಿರಂಗ ಸವಾಲು ಹಾಕಿದರು.
ಸದನದಲ್ಲಿ ಸುಮಾರು ೧ ಗಂಟೆ ೧೨ ನಿಮಿಷಗಳ ಕಾಲ ಮಾತನಾಡಿದ ಸಿಎಂ ಸೊರೇನ್, ತಮ್ಮ ಭಾಷಣದ ಉದ್ದಕ್ಕೂ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಆದರೆ, ಸದನದಲ್ಲಿ ಬಿಜೆಪಿಯ ಯಾವ ಶಾಸಕರು ಇರಲಿಲ್ಲ.
ಬಿಜೆಪಿ ನಾಯಕರು ರಾಜ್ಯ ಮತ್ತು ದೇಶದ ಅಭಿವೃದ್ಧಿಯ ಬಗ್ಗೆ ಕೇವಲ ಮಾತನಾಡುತ್ತಾರೆ. ಆದರೆ, ಯಾವುದೇ ಕೆಲಸವನ್ನು ಮಾಡುವುದಿಲ್ಲ.
ಮಲತಾಯಿ ಧೋರಣೆ ಅನುಸರಿಸುವುದು, ಜನಾದೇಶ ಸಿಗಲಿ ಅಥವಾ ಸಿಗದಿರಲಿ ಆ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಬಿಜೆಪಿಯ ಉದ್ದೇಶ.
ಅವರ ನಡವಳಿಕೆ ತುಂಬಾ ಅಪಾಯಕಾರಿ. ಸರ್ನಾ ಧರ್ಮ ಸಂಹಿತೆಯನ್ನು ಗುರಿಯಾಗಿಸಿಕೊಂಡು ಹುಚ್ಚುತನದ ಸ್ಥಿತಿಯಲ್ಲಿ ಕುಳಿತಿದೆ.