ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡದಿಯ ಟೌನ್ ಶಿಪ್ ಯೋಜನೆಯನ್ನು ಹಿಂಪಡೆಯದಿದ್ದರೇ ವಿಧಾನಸೌಧ ಹಾಗೂ ಮುಖ್ಯಮಂತ್ರಿಗಳ ನಿವಾಸ ಕೃಷ್ಣ ಕಛೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಸರ್ಕಾರಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.
ಬಿಡದಿಯಲ್ಲಿ ಟೌನ್ ಶಿಪ್ ಯೋಜನೆಯನ್ನು ವಿರೋಧಿಸಿ ರೈತರಿರು ಹಮ್ಮಿಕೊಂಡಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ನಿಖಿಲ್ ಸರಕಾರ ಎಷ್ಟೇ ದಬ್ಬಾಳಿಕೆ ಮಾಡಿದರೂ ರೈತರಿಂದ ಒಂದಿಂಚು ಭೂಮಿಯನ್ನೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ಟೌನ್ ಶಿಪ್ ಯೋಜನೆಯನ್ನು ಹಿಂಪಡೆಯದಿದ್ದರೇ ಭೈರಮಂಗಲ ಗ್ರಾಮದಿಂದ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಹಾಗೂ ಮುಖ್ಯಮಂತ್ರಿಗಳ ನಿವಾಸ ಕೃಷ್ಣ ಕಛೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
“ಬಿಡದಿಯಲ್ಲಿ ಎಐ ಸಿಟಿ ಯಾರಿಗಾಗಿ ಮಾಡುತ್ತಿದ್ದೀರಿ? ಬೆಂಗಳೂರಿನ ರಸ್ತೆಯ ಗುಂಡಿಗಳನ್ನು ಸರಿಪಡಿಸಲು ಆರು ತಿಂಗಳಿನಿಂದ ಹಣವಿಲ್ಲದೆ ಹೀಗೆ ಕೂತಿರುವ ಸರ್ಕಾರ, ಎಐ ಸಿಟಿ ನಿರ್ಮಿಸಲು ಹೇಗೆ ಸಾಧ್ಯ?” ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದರು.
ರೈತರ ಒಪ್ಪಿಗೆ ಇಲ್ಲದೆ ಜಮೀನು ಕಸಿದುಕೊಳ್ಳುತ್ತಿರುವುದು ಏಕೆ? ರೈತರ ಮೇಲೆ ಬಲವಂತ ಹೇರಿಕೆ ಏಕೆ? ಇದು ರೈತರ ಹಿತಾಸಕ್ತಿಗಾಗಿಯೇ ಅಥವಾ ರಿಯಲ್ ಎಸ್ಟೇಟ್ ಮಾಫಿಯಾ ಪ್ರಯೋಜನಕ್ಕಾಗಿ?” ಎಂದು ಆಕ್ರೋಶ ವ್ಯಕ್ತಪಡಿಸಿದರು. “ರೈತರ ಮಕ್ಕಳ ಭವಿಷ್ಯ ಕುರಿತು ಯೋಚಿಸಿದ್ದೀರಾ? ಜಿಲ್ಲೆಯಲ್ಲಿ ಇರುವ ಕಾಂಗ್ರೆಸ್ ಶಾಸಕರು ಯಾವಾಗಲೂ ರೈತರ ಜೊತೆ ಮಾತುಕತೆ ನಡೆಸಿದ್ದಾರಾ? ಈ ಯೋಜನೆಗೆ ಸಂಬಂಧಿಸಿದಂತೆ ಸಾಮಾಜಿಕ ಸಮೀಕ್ಷೆ ನಡೆಸಲಾಗಿದೆಯೇ?” ಎಂದು ಸರ್ಕಾರವನ್ನು ಪ್ರಶ್ನಿಸಿದರು.
“ಈ ಯೋಜನೆಗೆ 80 ಶೇಕಡಾ ರೈತರು ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಅಧಿಕಾರಿಗಳ ಮೂಲಕ ರೈತರ ಮೇಲೆ ದಬ್ಬಾಳಿಕೆ, ಹಿಂಸೆ ಮುಂದುವರಿಯುತ್ತಿದೆ. ಉಪ ಮುಖ್ಯಮಂತ್ರಿ ರೈತರ ವಿರುದ್ಧ ನಿಂತಿದ್ದಾರೆ, ಆದರೆ ರೈತರ ಶಕ್ತಿ ಎಷ್ಟಿದೆ ಎಂಬುದರ ಅರಿವು ಅವರಿಗೆ ಇಲ್ಲ. ರೈತರು ಹೋರಾಡುವುದೂ ಗೊತ್ತು, ಹಕ್ಕುಗಳನ್ನು ಕಾಪಾಡಿಕೊಳ್ಳುವುದೂ ಗೊತ್ತು” ಎಂದು ಎಚ್ಚರಿಕೆ ನೀಡಿದರು.
“ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರು ರೈತರಿಂದ ಒಂದಿಂಚು ಜಮೀನು ಕಸಿದುಕೊಳ್ಳಲು ಸಾಧ್ಯವಿಲ್ಲ. ರೈತರ ಧ್ವನಿಗೆ ನಾವು ಸದಾ ಬೆಂಬಲವಾಗಿದ್ದೇವೆ. ಈ ಅನ್ಯಾಯದ ಯೋಜನೆಯನ್ನು ಹಿಂಪಡೆಯುವವರೆಗೂ ಹೋರಾಟ ನಿಲ್ಲುವುದಿಲ್ಲ” ಎಂದು ನಿಖಿಲ್ ಕುಮಾರಸ್ವಾಮಿ ಸ್ಪಷ್ಟ ಸಂದೇಶ ನೀಡಿದರು.