ಸೃಷ್ಟಿಕರ್ತ ಪರಮಾತ್ಮ, ಪರಮಾತ್ಮನ ಸ್ವರೂಪವಾದ ಭಕ್ತರನ್ನು ಬಿಟ್ಟು, ಯಾರಿಗೂ ನಮ್ಮನ್ನು ಉಚ್ಚಾಟನೆ ಮಾಡುವ ಅಧಿಕಾರ ಈ ಜಗತ್ತಿನಲ್ಲಿ ಇಲ್ಲ, ಎಂದು ಪಂಚಮಸಾಲಿ ಸಮುದಾಯದ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೃತ್ಯುಂಜಯ ಸ್ವಾಮೀಜಿಯನ್ನು ಕೂಡಲಸಂಗಮ ಪೀಠದಿಂದ ಉಚ್ಛಾಟನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬೆನ್ನಲ್ಲೇ, ಬಾಗಲಕೋಟೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಭಕ್ತರು, ಸಮುದಾಯದ ಪ್ರಮುಖರ ಜೊತೆ ಸ್ವಾಮೀಜಿ ಸಭೆ ನಡೆಸಿದ್ದಾರೆ.
“ನಾನು ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇನೆ. ಪೀಠಕ್ಕೂ ಟ್ರಸ್ಟ್‌ಗೆ ಯಾವುದೇ ಸಂಬಂಧವಿಲ್ಲ. ಪೀಠವನ್ನು ಕಲ್ಲು ಅಥವಾ ಮಣ್ಣಿನಲ್ಲಿ ಕಟ್ಟಿಲ್ಲ. ಭಕ್ತರ ತೀರ್ಮಾನವೇ ಅಂತಿಮ ತೀರ್ಮಾನ. ನಾನು ಕೂಡಲಸಂಗಮದಲ್ಲೇ ಇರುತ್ತೇನೆ. ಇಲ್ಲಿನ ಜಾಗ ಮಾತ್ರ ನನ್ನ ಹೆಸರಿನಲ್ಲಿ ಇದೆ, ಉಳಿದ ಯಾವುದೇ ಸ್ಥಳಗಳಲ್ಲಿ ನನ್ನ ಹೆಸರಿನಲ್ಲಿ ಜಾಗವಿಲ್ಲ. ಪರ್ಯಾಯ ಪೀಠವನ್ನು ಕಟ್ಟುವುದಿಲ್ಲ, ಇದೇ ಪೀಠ ಮುಂದುವರಿಯುತ್ತದೆ. ಇತ್ತೀಚಿನ ಎಐ ತಂತ್ರಜ್ಞಾನ ಬಳಸಿ ವಿಡಿಯೋ ನಿರ್ಮಾಣ ಮಾಡಲಾಗಿದ್ದರೂ ನಾವು ಹೆದರುವುದಿಲ್ಲ” ಎಂದು ಹೇಳಿದ್ದಾರೆ.
ಅಕ್ರಮ ಆಸ್ತಿ ಗಳಿಕೆ, ಲಿಂಗಾಯ ಧರ್ಮ ವಿರೋಧಿ ಹೇಳಿಕೆ, ಅವರ ಪೀಠದಲ್ಲಿ ಆ್ಯಕ್ಟಿವ್ ಆಗಿ ಇಲ್ಲದಿರುವುದು, ಸನ್ಯಾಸಿಗೆ ಇರುವಂತಹ ಮೂಲಭೂತ ಲಕ್ಷಣ ಕಡಿಮೆ ಆಗಿರುವುದು ಉಚ್ಛಾಟನೆ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ತಿಳಿಸಿದ್ದರು.
ಸ್ವಾಮೀಜಿಗಳ ಬಗ್ಗೆ ಸಾಕಷ್ಟು ಆರೋಪಗಳಿದ್ದವು. ಅವರು ಟ್ರಸ್ಟ್ ನ ಮಾತು ಕೇಳುತ್ತಿರಲಿಲ್ಲ. ಬೈಲಾದ ವಿರುದ್ಧವಾಗಿ ನಡೆದುಕೊಂಡಿರುವುದು ಕಂಡುಬಂದಿತ್ತು. ಜತೆಗೆ ಸಮಾಜ ಒಡೆಯುವ ಕೆಲಸ ಮಾಡಿದ್ದರು. 2014ರಲ್ಲಿಯೇ ಇದಕ್ಕೆ ಸಂಬಂಧಿಸಿದಂತೆ ಅವರಿಗೆ ನೋಟಿಸ್ ನೀಡಲಾಗಿತ್ತು. ಸಭೆಯಲ್ಲಿ ಟ್ರಸ್ಟ ನ 30 ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು ಇದೆಲ್ಲದರ ಬಗ್ಗೆ ಸುಧೀರ್ಘ ಚರ್ಚೆ ನಡೆಸಲಾಯಿತು. ನಂತರ ಅವರ ಉಚ್ಛಾಟನೆ ನಿರ್ಧಾರ ಕೈಗೊಳ್ಳಾಯಿತು, ಎಂದು ಹೇಳಿದರು.