ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ಸೋಮವಾರ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಕ್ಕೆ ಮರಳಲಿದ್ದಾರೆ. ಇದರಿಂದ ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಗೆ ಬಲ ತುಂಬಲಿದ್ದಾರೆ.
ವಿಶ್ವದ ನಂಬರ್ 1 ವೇಗಿಯಾಗಿರುವ ಜಸ್ ಪ್ರೀತ್ ಬುಮ್ರಾ ಬೆನ್ನುನೋವಿನ ಸಮಸ್ಯೆಯಿಂದ ವಿಶ್ರಾಂತಿಯಲ್ಲಿದ್ದು, ಚಾಂಪಿಯನ್ಸ್ ಟ್ರೋಫಿಗೂ ಆಡಿರಲಿಲ್ಲ.
ಐಪಿಎಲ್ ನ ಮೊದಲ ಮೂರು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿದ್ದರೂ ನಾಲ್ಕು ಪಂದ್ಯಗಳಿಂದ ಬುಮ್ರಾ ಮೈದಾನಕ್ಕೆ ಇಳಿದಿರಲಿಲ್ಲ. ಇದೀಗ ಚೇತರಿಸಿಕೊಂಡಿರುವ ಬುಮ್ರಾ ಆರ್ ಸಿಬಿ ವಿರುದ್ಧದ ಪಂದ್ಯಕ್ಕೆ ಅಖಾಡಕ್ಕೆ ಇಳಿಯಲಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿರುವ ಬಿಸಿಸಿಐನ ಕ್ರಿಕೆಟ್ ಅಕಾಡೆಮಿಯಿಂದ ವೈದ್ಯಕೀಯ ಸಮಿತಿಯಿಂದ ಪ್ರಮಾಣ ಪತ್ರ ಲಭ್ಯವಾಗಿದ್ದು, ಅತಿಯಾದ ಕ್ರಿಕೆಟ್ ಒತ್ತಡದಿಂದ ಬೆನ್ನುನೋವಿನಿಂದ ಬಳಲುತ್ತಿದ್ದ ಬುಮ್ರಾ ಕಳೆದ ಜನವರಿಯಿಂದ ಯಾವುದೇ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ.
ಜನವರಿ ೪ರಂದು ಬುಮ್ರಾ ಅವರ ಅಂತಿಮ ಹಂತದ ಫಿಟ್ನೆಸ್ ಪರೀಕ್ಷೆ ನಡೆದಿದ್ದು, ಇದರಲ್ಲಿ ಪೂರ್ಣವಾಗಿ ಚೇತರಿಸಿಕೊಂಡಿರುವುದು ದೃಢಪಟ್ಟಿದೆ. ಆರ್ ಸಿಬಿ ಪಂದ್ಯಕ್ಕೆ ಲಭ್ಯವಾಗಿದ್ದರೂ ಅಂತಿಮ 11ರ ಬಳಗದಲ್ಲಿ ಬುಮ್ರಾ ಇರುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.