Menu

ಕೌಶಲ್ಯಪೂರ್ಣ ತಂತ್ರಜ್ಞರು, ದಾದಿಯರಿಗಾಗಿ ಕರ್ನಾಟಕ ಕಾರ್ಯಪಡೆಯತ್ತ ಜಪಾನ್‌ ಕಣ್ಣು

ನಾನಾ  ಕ್ಷೇತ್ರಗಳಲ್ಲಿ ಕೌಶಲ್ಯಪೂರ್ಣ ವೃತ್ತಿಪರರರು, ನರ್ಸ್ ಗಳ ಅಗತ್ಯವಿದೆ ಎಂದು ಬೆಂಗಳೂರಿನಲ್ಲಿರುವ ಜಪಾನ್‌ನ ಕಾನ್ಸುಲ್-ಜನರಲ್ ನಕೇನ್ ಸ್ಟಮೊ ಸ್ಪಷ್ಟಪಡಿಸಿದ್ದು, ಕರ್ನಾಟಕದಲ್ಲಿ ತಾಂತ್ರಿಕ ಮತ್ತು ವಿಶೇಷ ಕೋರ್ಸ್ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಜಪಾನ್‌ನಲ್ಲಿ ಕಾರ್ಯಪಡೆಯ ಕೊರತೆ ಇದೆ. ವಿಶೇಷವಾಗಿ ಆರೋಗ್ಯ ರಕ್ಷಣೆ, ಐಟಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಕೌಶಲ್ಯಗಾರರ ಅಗತ್ಯವಿದೆ. ರಾಜ್ಯದಿಂದ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಉತ್ಸುಕವಾಗಿದೆ.  ವೈಟ್-ಕಾಲರ್ ತಜ್ಞರ ಜೊತೆಗೆ, ಕೌಶಲ್ಯಪೂರ್ಣ ತಂತ್ರಜ್ಞರ ಅಗತ್ಯವಿದೆ. ದಾದಿಯರ ಅಗತ್ಯ ಹೆಚ್ಚುತ್ತಿದೆ. ಜಪಾನಲ್ಲಿ ಈಗ ವಯಸ್ಸಾದವರ ಸಂಖ್ಯೆ ಹೆಚ್ಚಾಗಿದೆ. ಜನಸಂಖ್ಯೆ ಕ್ಷೀಣಿಸುತ್ತಿದೆ. 2030 ರ ವೇಳೆಗೆ, ಐಟಿ ವಲಯಲ್ಲಿ 7,90,000 ವೃತ್ತಿಪರರ ಕೊರತೆ ಎದುರಾಗುವ ನಿರೀಕ್ಷೆಯಿದೆ ಎಂದು  ಮಾಹಿತಿ ನೀಡಿದರು.

ವಿಕಾಸ ಸೌಧದಲ್ಲಿ ಬೆಂಗಳೂರಿನಲ್ಲಿರುವ ಜಪಾನ್‌ನ ಕಾನ್ಸುಲ್-ಜನರಲ್ ನಕೇನ್‌ ಸ್ಟಮೊ ಅವರೊಂದಿಗೆ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಸಭೆ ನಡೆಸಿದ ನಂತರ ಮಾಹಿತಿ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕದ ಕೌಶಲ್ಯಪೂರ್ಣ ವೃತ್ತಿಪರರ ಅಗತ್ಯವಿದೆ ಎಂದು ಜಪಾನ್‌ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಜಪಾನ್ ಜೊತೆ ಸಹಕಾರಕ್ಕೆ ಬದ್ಧ ಎಂದು ಸಚಿವರು  ತಿಳಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ತಾಂತ್ರಿಕ ಮತ್ತು ವಿಶೇಷ ಕೋರ್ಸ್ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ತುರ್ತು ಅಗತ್ಯವಿದೆ. ನಮ್ಮ ಸರ್ಕಾರವು ಈಗಾಗಲೇ ಕೇಂದ್ರೀಕೃತ ಕೌಶಲ್ಯವರ್ಧನೆಯ ಮೂಲಕ ಐಟಿಐ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಮುಂದಾಗಿದೆ. ಜಾಗತಿಕ ಉದ್ಯೋಗ ಅವಕಾಶಗಳ ಮೇಲೆ ಒತ್ತು ನೀಡುವ ಮೂಲಕ ಜಪಾನೀಸ್, ಜರ್ಮನ್ ಮತ್ತು ಇಂಗ್ಲಿಷ್ ಸೇರಿದಂತೆ ವಿದೇಶಿ ಭಾಷಾ ತರಬೇತಿಯನ್ನು ಪರಿಚಯಿಸುವ ಯೋಜನೆಯನ್ನು ಘೋಷಿಸಿದೆ ಎಂದರು.

ಇಲಾಖೆಯ ನಿಯೋಗವು ಶೀಘ್ರದಲ್ಲೇ ಜಪಾನ್‌ಗೆ ಭೇಟಿ ನೀಡಿ ಅದರ ಕಾರ್ಯಪಡೆಯ ಮಾದರಿಯನ್ನು ಅಧ್ಯಯನ ಮಾಡಲಿದೆ ಎಂದು  ಶರಣ್‌ ಪ್ರಕಾಶ್‌ ಪಾಟೀಲ್‌ ತಿಳಿಸಿದರು.

ಬೆಂಗಳೂರಿನಲ್ಲಿ ಜಪಾನಿನ ಕಂಪನಿಗಳು ಸ್ಥಳೀಯ ನರ್ಸಿಂಗ್ ಪದವೀಧರರ ಸುಗಮ ಉದ್ಯೋಗಕ್ಕೆ ಅನುಕೂಲವಾಗುವಂತೆ ಸಿಎಸ್‌ಆರ್ ಉಪಕ್ರಮಗಳ ಅಡಿಯಲ್ಲಿ ಜಪಾನೀಸ್ ಭಾಷೆ ಮತ್ತು ಕೌಶಲ್ಯ ತರಬೇತಿಯನ್ನು ನೀಡಲು ಸಿದ್ಧವಾಗಿವೆ ಎಂದುನಕೇನ್‌ ಸ್ಟಮೊ ಸ್ಟಷ್ಟಪಡಿಸಿದರು. ಕೈಗಾರಿಕಾ ಉತ್ಪಾದನೆ, ನಿರ್ಮಾಣ, ಹಡಗು ನಿರ್ಮಾಣ, ಯಂತ್ರೋಪಕರಣಗಳ ನಿರ್ವಹಣೆ, ಆಟೋ ದುರಸ್ತಿ, ವಾಯುಯಾನ, ಆತಿಥ್ಯ, ಸಾರಿಗೆ, ರೈಲ್ವೆ, ಕೃಷಿ, ಮೀನುಗಾರಿಕೆ, ಜಲಚರ ಸಾಕಣೆ, ಆಹಾರ ಸೇವೆಗಳು, ಅರಣ್ಯ ಮತ್ತು ಮರ ಸಂಸ್ಕರಣೆ ಮುಂತಾದ ಕ್ಷೇತ್ರಗಳಲ್ಲಿ ಬೇಡಿಕೆ ಇದೆ ಎಂದು ವಿವರಿಸಿದರು.

ಈ ನಿಟ್ಟಿನಲ್ಲಿ ಕರ್ನಾಟಕದೊಂದಿಗೆ ಜಪಾನ್ ಸಹಕರಿಸಲು ಸಿದ್ಧವಾಗಿದೆ. ಕಾರ್ಯಪಡೆಯ ಅಭಿವೃದ್ಧಿಯಲ್ಲಿ ಎಲ್ಲ ರೀತಿಯ ಬೆಂಬಲವನ್ನು ನೀಡಲಾಗುವುದು” ಎಂದರು.

Related Posts

Leave a Reply

Your email address will not be published. Required fields are marked *