ಭಯೋತ್ಪಾದಕರಿಂದ ವಶಪಡಿಸಿಕೊಂಡಿದ್ದ ಸ್ಫೋಟಕಗಳ ಪರಿಶೀಲನೆ ವೇಳೆ ಸ್ಫೋಟಗೊಂಡ ಪರಿಣಾಮ 9 ಮಂದಿ ಮೃತಪಟ್ಟಿದ್ದು, 29 ಮಂದಿ ಗಾಯಗೊಂಡ ಘಟನೆ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಜರುಗಿದೆ.
ದೆಹಲಿಯ ಕೆಂಪುಕೋಟೆ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಫರಿದಾಬಾದ್‌ನಲ್ಲಿ ವಶಪಡಿಸಿಕೊಂಡಿದ್ದ ಬೃಹತ್ ಸ್ಫೋಟಕಗಳ ಸಂಗ್ರಹದ ಮಾದರಿಗಳನ್ನು ನೌಗಾಮ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಮತ್ತು ವಿಧಿವಿಜ್ಞಾನ ಅಧಿಕಾರಿಗಳು ಪರಿಶೀಲಿಸುವಾಗ ಘಟನೆ ನಡೆದಿದೆ. ಇದು ಆಕಸ್ಮಿಕ ಘಟನೆ. ಮೃತ ಮತ್ತು ಗಾಯಗೊಂಡವರಲ್ಲಿ ಪೊಲೀಸರು ಮತ್ತು ವಿಧಿ ವಿಜ್ಞಾನ ಇಲಾಖೆಯ ಸಿಬ್ಬಂದಿ ಹೆಚ್ಚಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ 11:20 ರ ಸುಮಾರಿಗೆ ಠಾಣೆಯಲ್ಲಿ ಸಂಭವಿಸಿದ ಸ್ಫೋಟದಿಂದ ಶ್ರೀನಗರ ಬೆಚ್ಚಿಬಿದ್ದಿದೆ. ಭಾರೀ ಶಬ್ದ ಮತ್ತು ಹೊಗೆಯಿಂದ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದರು.
ಬಂಧಿತ ವೈದ್ಯ ಮುಜಮ್ಮಿಲ್ ಗನೈ ಅವರ ಫರಿದಾಬಾದ್ ಬಾಡಿಗೆ ನಿವಾಸದಿಂದ ವಶಪಡಿಸಿಕೊಳ್ಳಲಾದ 360 ಕೆಜಿ ಸ್ಫೋಟಕ ವಸ್ತುಗಳ ಮಾದರಿಗಳನ್ನು ತನಿಖೆಗಾಗಿ ತೆಗೆದುಕೊಳ್ಳುವಾಗ ಸ್ಫೋಟ ಸಂಭವಿಸಿದೆ ಎಂದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


