ಜಾಲಹಳ್ಳಿ ಅಂಡರ್ ಪಾಸ್ ಕಾಮಗಾರಿ ವಿಚಾರವಾಗಿ ವಿರೋಧ ಪಕ್ಷದ ನಾಯಕರ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಶಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಮುನಿರಾಜು ಅವರ ಪ್ರಶ್ನೆಗೆ ಶಿವಕುಮಾರ್ ಅವರು ಮಂಗಳವಾರ ಉತ್ತರಿಸಿದರು.
ಜಾಲಹಳ್ಳಿ ಅಂಡರ್ ಪಾಸ್ ಕಾಮಗಾರಿ ಪ್ರಾರಂಭ ಹಾಗೂ ಕೆಲವರಿಗೆ ಪರಿಹಾರ ಬಾಕಿ ಇರುವ ವಿಚಾರವಾಗಿ ಮುನಿರಾಜು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, “ಈ ಅಂಡರ್ ಪಾಸ್ ಕಾಮಗಾರಿಯನ್ನು ಪಿಜಿಬಿ ಎಂಬ ಗುತ್ತಿಗೆ ದಾರ ಸಂಸ್ಥೆಗೆ ನೀಡಿದ್ದೇವೆ. 2021 ರಲ್ಲಿ 57 ಕೋಟಿ ರೂ. ಅನುದಾನದಲ್ಲಿ ಈ ಕೆಲಸವನ್ನು ವಹಿಸಲಾಗಿತ್ತು. ಈ ಯೋಜನೆಗೆ ಸಂಬಂಧಿಸಿದಂತೆ 48 ಜನ ಆಸ್ತಿ ಮಾಲೀಕರಿಗೆ ಪರಿಹಾರ ನೀಡಲಾಗಿದೆ. ಒಟ್ಟು 85 ಕೋಟಿ ಮೊತ್ತದ ಪರಿಹಾರ ನೀಡಲಾಗು ತ್ತಿದೆ. ಇಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ 139 ಕೋಟಿ ರೂ. ಅಂದಾಜು ಮಾಡಲಾಗಿದೆ. ಇನ್ನು 26 ಭೂಮಾಲೀಕರು ತಮ್ಮ ಆಸ್ತಿ ನೀಡಬೇಕಿದ್ದು, ಇದಕ್ಕೆ 53 ಕೋಟಿ ರೂ. ಪರಿಹಾರ ನೀಡಬೇಕಾಗಿದೆ. ಟಿಡಿಆರ್ ಅಥವಾ ಹಣ ನೀಡಬೇಕಾಗಿದೆ. ಈ ಆಸ್ತಿ ಮಾಲೀಕರ ಜೊತೆ ಶಾಸಕ ಮುನಿರಾಜು ಅವರು ಚರ್ಚೆ ಮಾಡಿದರೆ ಅವರಿಗೆ ಟಿಡಿಆರ್ ನೀಡಿ ಕೆಲಸ ಪ್ರಾರಂಭ ಮಾಡಿಸಲಾಗುವುದು. ಇದು ಸಂಚಾರ ದಟ್ಟಣೆ ಇರುವ ಪ್ರಮುಖ ಪ್ರದೇಶ. ಹೀಗಾಗಿ ಅವರು ಬೇಡಿಕೆ ಇಟ್ಟಿರುವುದು ಸರಿಯಾಗಿದೆ” ಎಂದರು.
ಈ ಮಧ್ಯೆ ಬಿಜೆಪಿ ಶಾಸಕ ಮುನಿರತ್ನ ಅವರು ನಮ್ಮ ಕ್ಷೇತ್ರದಲ್ಲಿ ಅನೇಕ ಮೇಲ್ಸೇತುವೆ ಕಾಮಗಾರಿಗಳು ನಿಂತಿದ್ದು, ಸಚಿವರು ಎಲ್ಲಾ ಶಾಸಕರ ಸಭೆ ಕರೆದು ನಮ್ಮ ಅಹವಾಲು ಸ್ವೀಕಾರ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಶಾಸಕ ಮುನಿರಾಜು ಅವರು ನನಗೆ ಪ್ರಶ್ನೆ ಕೇಳಿದ್ದು, ಅವರಿಗೆ ಉತ್ತರ ನೀಡಿದ್ದೇನೆ. ಮಿಸ್ಟರ್ ಮುನಿ… ಅವರು, ತಮ್ಮ ವಿಚಾರವಾಗಿ ಸದನದಲ್ಲಿ ಪ್ರಶ್ನೆ ಹಾಕಲಿ, ನಾನು ಅವರಿಗೂ ಉತ್ತರ ನೀಡುತ್ತೇನೆ” ಎಂದು ಹೇಳಿದರು.
ಶಾಸಕ ಎಸ್.ಟಿ ಸೋಮಶೇಖರ್ ಅವರು ಹಾಲಿಡೇ ವಿಲೇಜ್ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ವಿಳಂಬದ ಬಗ್ಗೆ ಕೇಳಿದ ಪ್ರಶ್ನೆಗೆ, “ಬೆಂಗಳೂರು ನಗರದಲ್ಲಿ ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ ಹಾಗೂ ಯಶವಂತಪುರ ಕ್ಷೇತ್ರಗಳು ಬಹಳ ದೊಡ್ಡ ಕ್ಷೇತ್ರಗಳು. ನಾನು ಅವರ ಕ್ಷೇತ್ರದಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ನಾನೇ ಹೋಗಿದ್ದೆ. ಒಷನ್ ಕನ್ಸ್ಟ್ರಕ್ಷನ್ ಸಂಸ್ಥೆಗೆ ಕಾಮಗಾರಿ ನೀಡಲಾಗಿದೆ. ಗುತ್ತಿಗೆದಾರರನ್ನು ಕರೆದು ಮಾತನಾಡುತ್ತೇನೆ. ಹಾಲಿಡೇ ವಿಲೇಜ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಭಾಗದಲ್ಲಿ ಯುಟಿಲಿಟಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿವೆ. ಬಿಡಬ್ಲ್ಯೂಎಸ್ ಎಸ್ ಬಿ, ಪವರ್ ಲೈನ್ ಸ್ಥಳಾಂತರಿಸಬೇಕಿದೆ. ಹೀಗಾಗಿ ತಡವಾಗುತ್ತಿದೆ. ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಮಾಡುವುದು ದೊಡ್ಡ ಕೆಲಸವಲ್ಲ, ಆದರೆ ನಮಗೆ ಕೆಲಸ ಆಗುವುದು ಮುಖ್ಯ. ನಾನು ಸೋಮಶೇಖರ್ ಅವರ ಕ್ಷೇತ್ರಕ್ಕೆ ಬಹಳ ವಿಶೇಷ ಕಾಳಜಿ ವಹಿಸುತ್ತಿದ್ದೇನೆ ಎಂದು ಭರವಸೆ ನೀಡುತ್ತೇನೆ” ಎಂದರು.


