ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಿಂದ 10 ಕುಟುಂಬಗಳನ್ನು ಕಳೆದುಕೊಂಡೆ ಎಂದು ಉಗ್ರ ಸಂಘಟನೆ ಜೈಷೆ ಇ ಮೊಹಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಹೇಳಿಕೊಂಡಿದ್ದಾನೆ.
ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಮಂಗಳವಾರ ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಜೈಷೆ ಇ ಮೊಹಮದ್ ಮತ್ತು ಲಷ್ಕರೆ ಇ- ತೋಯ್ಬಾ ಸಂಘಟನೆಯ 9 ನೆಲೆಗಳ ಮೇಲೆ ಭಾರತ ಬಾಂಬ್ ದಾಳಿ ನಡೆಸಿ ಧ್ವಂಸಗೊಳಿಸಿತ್ತು.
ಬಿಬಿಸಿ ಉರ್ದು ಚಾನೆಲ್ ಮಸೂದ್ ಅಜರ್ ಹೇಳಿಕೆಯನ್ನು ಪ್ರಸಾರ ಮಾಡಿದ್ದು, ಇದರಲ್ಲಿ ಭಾರತ ದಾಳಿಯಿಂದ ಆಗಿರುವ ನಷ್ಟವನ್ನು ವಿವರಿಸಿದ್ದಾರೆ.
ದಾಳಿಯಲ್ಲಿ ಮಸೂದ್ ಅಜರ್ ಸೋದರಿ ಹಾಗೂ ಆಕೆಯ ಪತಿ, ಸೋದರ ಸಂಬಂಧಿ ಹಾಗೂ ಆತನ ಪತ್ನಿ, ನಾದಿನಿ ಹಾಗೂ 5 ಮಕ್ಕಳು ಮೃತಪಟ್ಟಿದ್ದಾರೆ. ಮತ್ತೊಂದು ಶಿಬಿರದಲ್ಲಿದ್ದ ಅಜರ್ ಆಪ್ತ ಹಾಗೂ ಆತನ ತಾಯಿ, ಮತ್ತಿಬ್ಬರು ಆಪ್ತರು ಅಸುನೀಗಿದ್ದಾರೆ.
18 ಎಕರೆ ವಿಸ್ತೀರ್ಣದ ಉಗ್ರರ ನೆಲೆ ಕಾರ್ಯಾಚರಣೆ ನಡೆಸುತ್ತಿದ್ದು, ಉಸ್ಮಾನ್ ಅಲಿ ಇಲ್ಲಿನ ಮುಖ್ಯಸ್ಥನಾಗಿದ್ದು, ಉಗ್ರರ ಸಂಘಟನೆಗೆ ನೇಮಕಾತಿ ಮಾಡಿಕೊಳ್ಳುವ ಜವಾಬ್ದಾರಿ ನಿರ್ವಹಿಸುತ್ತಿದ್ದ.
ಮಸೂದ್ ಅಜರ್ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದು, 2001ರ ಸಂಸತ್ ಭವನದ ಮೇಲೆ ದಾಳಿ ಹಾಗೂ 2016ರ ಪಾಹಲ್ಕೋಟ್ ಮತ್ತು 2019ರ ಪುಲ್ವಾಮಾ ದಾಳಿ ನಡೆಸಿದ್ದಾನೆ.