ಎಲ್ಇಟಿ ಉಗ್ರ ಟಿ ನಾಸೀರ್ಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನೆರವು ನೀಡುತ್ತಿದ್ದ ಬಂಧಿತರ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ ಚುರುಕುಗೊಳಿಸಿದೆ. ಬಂಧಿತ ವೈದ್ಯ ಡಾ. ನಾಗರಾಜ್ ಹಾಗೂ ಎಎಸ್ಐ ಚಾಂದ್ ಪಾಷ ಬ್ಯಾಂಕ್ ಖಾತೆಗಳಿಗೆ ನಾನಾ ಮೂಲಗಳಿಂದ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗಿದೆ.
ಡಾ. ನಾಗರಾಜ್ ಚಿಕಿತ್ಸೆಗೆ ಬರುತ್ತಿದ್ದ ಕೈದಿಗಳಿಗೆ ಕುಟುಂಬದವರ ಜೊತೆ ಮಾತನಾಡಲು ಪ್ರತ್ಯೇಕ ಮೊಬೈಲ್ ಇಟ್ಟುಕೊಂಡು ಅದಕ್ಕೆ ಪ್ರತಿ ನಿಮಿಷದ ಲೆಕ್ಕದಲ್ಲಿ ಬಾಡಿಗೆ ನಿಗದಿಪಡಿಸಿದ್ದ ಎಂಬುದು ಎನ್‌ಐಎ ತನಿಖೆಯಲ್ಲಿ ತಿಳಿದು ಬಂದಿದೆ. ಬಂಧಿತ ಆರೋಪಿಗಳ ಇಂಟರ್ನೆಟ್ ಡಿಟೇಲ್ಸ್ ಪಡೆದುಕೊಳ್ಳಲು ತನಿಖಾ ತಂಡ ಮುಂದಾಗಿದೆ.
ಡಾ ನಾಗರಾಜ್ 14 ವರ್ಷಗಳಿಂದ ಜೈಲಿನಲ್ಲಿ ಕೈದಿಗಳಿಗೆ 300ಕ್ಕೂ ಹೆಚ್ಚು ಮೊಬೈಲ್ ಮಾರಾಟ ಮಾಡಿದ್ದ ಎಂಬುದು ಬಯಲಾಗಿದೆ. ಹತ್ತು ಸಾವಿರ ರೂ.ಬೆಲೆಯ ಮೊಬೈಲ್ ಅನ್ನು ಆತ 35000 ರೂಪಾಯಿಗೆ ಮಾರಾಟ ಮಾಡಿದ್ದ ಎಂಬುದು ತಿಳಿದು ಬಂದಿದೆ. ಹೀಗೆಯೇ ಆತ 70 ಲಕ್ಷ ರೂಪಾಯಿ ಗಳಿಸಿದ್ದ ಎಂದು ಬಹಿರಂಗಗೊಂಡಿದೆ.
ನಾಗರಾಜ್ ಆಪ್ತ ಸಹಾಯಕಿ ಪಲ್ಲವಿ ಖಾತೆಯಲ್ಲಿ 70 ಲಕ್ಷ ರೂಪಾಯಿ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಚಾಂದ್ ಪಾಷ ಮಗನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವುದು, ಗಿಫ್ಟ್ ರೂಪದಲ್ಲಿ ಬೆಲೆಬಾಳುವ ವಸ್ತುಗಳು ಸಂಗ್ರಹವಾಗಿರುವುದು ಪತ್ತೆಯಾಗಿದೆ.
ಉಗ್ರ ನಾಸೀರ್ ಜೈಲಿನಿಂದ ತಪ್ಪಿಸಿಕೊಳ್ಳಲು ಸಂಚು ಹೂಡಿದ್ದ ಪ್ರಕರಣದಲ್ಲಿ ನಾಗರಾಜ್, ಚಾಂದ್ ಪಾಷಾ ಹಾಗೂ ಉಗ್ರ ಜುನೈದ್ ಅಹ್ಮದ್ ತಾಯಿ ಫಾತಿಮಾರನ್ನು ಎರಡು ದಿನಗಳ ಹಿಂದೆ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಎಎಸ್ಐ ಚಾಂದ್ ಪಾಷಾ ವಿರುದ್ಧ ತನಿಖೆಗೆ ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ. ಇಲಾಖಾ ತನಿಖೆ ನಡೆಸಿ ವರದಿ ನೀಡಲು ಸೂಚನೆ ನೀಡಿದ್ದಾರೆ. ತನಿಖೆ ನಡೆಸಿ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.