ಬೆಂಗಳೂರು: ಜಾತಿಗಣತಿ ವರದಿಯು ಬಹಳ ಜಟಿಲ ಸಮಸ್ಯೆಯಾಗಿದ್ದು,ಬಹಳಷ್ಟು ಚರ್ಚೆಯಾಗಬೇಕಿರುವುದರಿಂದ ಅಂತಿಮ ತೀರ್ಮಾನಕ್ಕೆ ಬರಲು ಇನ್ನೂ ಒಂದು ವರ್ಷವಾಗಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸಂಜಯನಗರ ನಿವಾಸದಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಅವರನ್ನು ಶುಕ್ರವಾರ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಜಾತಿಗಣತಿ ತೀರ್ಮಾನ ಕೈಗೊಳ್ಳಲು ಇನ್ನೂ ಒಂದು ವರ್ಷವಾಗಬಹುದು. ಬಹಳ ಜಟಿಲ ಸಮಸ್ಯೆ ಇದು. ಬಹಳಷ್ಟು ಚರ್ಚೆಯಾಗಬೇಕಿದೆ. ವರದಿ ಸ್ವೀಕಾರಕ್ಕೆ ಹತ್ತು ವರ್ಷ ತೆಗೆದುಕೊಂಡಿದೆ. ಹೀಗಾಗಿ ಇನ್ನೂ 1 ವರ್ಷವಾಗಬಹುದು. ಅಂಕಿ ಸಂಖ್ಯೆ ಜನರೇ ಬರೆಸಿದ್ದು ಅಲ್ವಾ. ಸಹಿ ಮಾಡಿದವರೆ ವಿರೋಧ ಮಾಡುತ್ತಿದ್ದಾರೆ.ಈ ಕುರಿತು ಸಮಗ್ರ ಚರ್ಚೆಯಾಗಬೇಕು ಎಂದರು.
ಸಾದರ ಜನರನ್ನು ಕಡಿಮೆ ತೋರಿಸಲಾಗಿದೆ. 64 ಸಾವಿರ ಅಷ್ಟೆ ತೋರಿಸಿದ್ದಾರೆ. ಮೂರು ಜಿಲ್ಲೆಗಳಲ್ಲಿ ಅವರಿದ್ದಾರೆ. ಹೀಗಾಗಿ ಅವರು ಧ್ವನಿ ಎತ್ತಿದ್ದಾರೆ. ಮೀಸಲಾತಿ ಹೆಚ್ಚು ಮಾಡುವುದು ಈಗ ಅಸಾಧ್ಯ. ಶಿಫಾರಸು ಅವರು ಮಾಡಿದ್ದಾರೆ. ಈಗ ಅಂಕಿ – ಅಂಶಗಳನ್ನು ಸರಿ ಮಾಡಬೇಕು. ಅಂಕಿ ಅಂಶಗಳನ್ನು ಸರಿ ಮಾಡಲು ಅವಕಾಶ ನೀಡಬೇಕು” ಎಂದು ತಿಳಿಸಿದರು.
ಜಾತಿಗಣತಿ ವರದಿ ಶಿಫಾರಸು ಸರಿಯಾಗಿ ಜಾರಿ ಆಗಬೇಕು. ಸರಿಯಾಗಿ ನಾವು ಮಾಡದಿದ್ದರೆ ಕಷ್ಟವಾಗುತ್ತದೆ. ನಾವು ಸರಿಯಾಗಿ ಜಾರಿ ಮಾಡಬೇಕು. ಇಲ್ಲವಾದರೆ ಹಿಂದಿನ ಸರ್ಕಾರದಂತೆ ನಮಗೆ ತೊಂದರೆಯಾಗುತ್ತದೆ. ಯಾವುದೇ ಸಮಾಜಕ್ಕೆ ನೋವಾಗಬಾರದು. ಇದಷ್ಟೇ ನಮ್ಮ ಉದ್ದೇಶ” ಎಂದು ಸ್ಪಷ್ಟಪಡಿಸಿದರು.
ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಜಾತಿಗಣತಿ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಜಾತಿಗಣತಿ ಯಾರಿಗೂ ತೊಂದರೆಯಾಗಲ್ಲ. ಲಿಂಗಾಯತ, ಒಕ್ಕಲಿಗ ಯಾರಿಗೂ ತೊಂದರೆಯಾಗಲ್ಲ. ಎಲ್ಲ ಸೇರಿ ಸರ್ಕಾರ ನಡೆಸುತ್ತಿದ್ದೇವೆ. ಎಲ್ಲರೂ ಒಪ್ಪುವ ತೀರ್ಮಾನ ಮಾಡುತ್ತೇವೆ ಎಂದರು.