ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆಯೇ ಉದ್ಯಮಿಗಳ ಮನೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ನಡೆದ ಈ ದಾಳಿಯಲ್ಲಿ ಹೊಸಕೆರೆಹಳ್ಳಿ, ಹನುಮಂತನಗರ, ಎಲೆಕ್ಟ್ರಾನಿಕ್ ಸಿಟಿ ಮತ್ತು ಬನಶಂಕರಿಯ ಬಿಡಿಎ ಕಾಂಪ್ಲೆಕ್ಸ್ ಸೇರಿದಂತೆ ಹಲವು ಕಡೆಗಳಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಆದಾಯಕ್ಕೆ ಮೀರಿದ ಆಸ್ತಿಗಳಿಕೆ ಮತ್ತು ತೆರಿಗೆ ವಂಚನೆ ಆರೋಪಗಳಡಿ ದೊರೆಸ್ವಾಮಿ ನಾಯ್ಡು ಮತ್ತು ಅವರ ಪುತ್ರ ಜವಹರ್ ದೊರೆಸ್ವಾಮಿ ನಿರ್ವಹಿಸುತ್ತಿರುವ ಪಿಇಎಸ್ ಶಿಕ್ಷಣ ಸಂಸ್ಥೆಗಳ ಮೇಲೆ ಈ ದಾಳಿ ನಡೆದಿದೆ. ದಾಳಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಭಾಗವಹಿಸಿದ್ದಾರೆ.
ಪಿಇಎಸ್ ಶಿಕ್ಷಣ ಸಂಸ್ಥೆಯ ಶಾಖೆಗಳಾದ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು, ಎಲೆಕ್ಟ್ರಾನಿಕ್ ಸಿಟಿ ಕಾಲೇಜು, ಹನುಮಂತನಗರ ಕಾಲೇಜು ಮತ್ತು ಆಂಧ್ರಪ್ರದೇಶದ ಕುಪ್ಪಂನಲ್ಲಿರುವ ಕಾಲೇಜಿನ ಮೇಲೂ ದಾಳಿ ನಡೆದಿದೆ. ದೊರೆಸ್ವಾಮಿ ನಾಯ್ಡು ಅವರ ಬನಶಂಕರಿಯ ಬಿಡಿಎ ಕಾಂಪ್ಲೆಕ್ಸ್ ಬಳಿಯ ಮನೆ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಪಿಇಎಸ್ ಸಂಸ್ಥೆಗಳ ಆರ್ಥಿಕ ವಹಿವಾಟುಗಳಲ್ಲಿ ಅಕ್ರಮಗಳಿರುವ ಬಗ್ಗೆ ಐಟಿ ಇಲಾಖೆಗೆ ಮಾಹಿತಿ ಲಭ್ಯವಾಗಿದ್ದು, ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಆರ್ಥಿಕ ವಹಿವಾಟುಗಳ ಮುಂದುವರಿಸಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿರುವ ಪೋಥಿಸ್ ಬಟ್ಟೆ ಶೋ ರೂಮ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಮೈಸೂರು ರಸ್ತೆಯ ಟೆಂಬರ್ ಲೇಔಟ್, ಗಾಂಧಿನಗರದಲ್ಲಿರುವ ಪೋಥಿಸ್ ಶೋ ರೂಮ್ ಮೇಲೆ ದಾಳಿಯಾಗಿತ್ತು. ಪೋಥಿಸ್ ತಮಿಳುನಾಡು ಉದ್ಯಮಿಗೆ ಸೇರಿದ್ದಾಗಿದ್ದು, ಚೆನ್ನೈಯಿಂದಲೇ ಐಟಿ ಅಧಿಕಾರಿಗಳು ಬಂದಿದ್ದರು.