Menu

ಗಿಳಿ ಶಾಸ್ತ್ರದವನಿಂದ ಬೆಂಗಳೂರಿನ ಐಟಿ ಅಧಿಕಾರಿಗೆ 35 ಲಕ್ಷ ರೂ. ನಾಮ

ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಗಿಳಿಶಾಸ್ತ್ರ ಹೇಳುವವನನ್ನು ನಂಬಿ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡಿರುವ ಪ್ರಕರಣ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬೆಂಗಳೂರಿನ ಐಟಿ ಇಲಾಖೆಯ ಕಚೇರಿಯಲ್ಲಿ ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರಿಗೆ ಡಿಸೆಂಬರ್‌ನಲ್ಲಿ ಗಿಳಿಶಾಸ್ತ್ರ ವಂಚಕನ ಪರಿಚಯವಾಗಿತ್ತು. ಭಾರತಿನಗರದ ಶ್ರೀ ಸರ್ಕಲ್ ಬಳಿ ರಸ್ತೆಯಲ್ಲಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬಾತ, ಅಧಿಕಾರಿಯ ಮುಖ ನೋಡಿ ನಿಮ್ಮ ಜಾತಕದಲ್ಲಿ ದೋಷವಿದೆ, ಅದನ್ನು ಸರಿಪಡಿಸಿದರೆ ದೊಡ್ಡ ಮಟ್ಟದಲ್ಲಿ  ಅಭಿವೃದ್ಧಿ ಕಾಣಲಿದ್ದೀರಿ ಎಂದು ನಂಬಿಸಿದ್ದ.

ಜೀವನದಲ್ಲಿ ಏಳಿಗೆಯಾಗಲು ವಿಶೇಷ ಪೂಜೆ ಮಾಡಬೇಕು ಎಂದು ಹೇಳಿದ ಶೇಖರ್, ಪೂಜೆಯ ನೆಪದಲ್ಲಿ ಅಧಿಕಾರಿಯಿಂದ 50 ಸಾವಿರ ರೂಪಾಯಿ ಪಡೆದಿದ್ದ. ಬಳಿಕ ಅಧಿಕಾರಿ ತನ್ನ ವರ್ಗಾವಣೆಯ ಬಗ್ಗೆ ವಿಚಾರಿಸಿದಾಗ, ಇದಕ್ಕೆ ದೊಡ್ಡ ಮಟ್ಟದ ಹೋಮ-ಹವನ ಬೇಕು. ಇದು ಸಫಲವಾಗಬೇಕಾದರೆ ನಿಮ್ಮ ಮನೆಯಲ್ಲಿರುವ ಎಲ್ಲಾ ಚಿನ್ನದ ಒಡವೆಗಳನ್ನು ಪೂಜೆಗೆ ಇಡಬೇಕು ಎಂದು ಹೇಳಿದ್ದ. ಅಧಿಕಾರಿ ವಂಚಕನ ಮಾತು ನಂಬಿ, ಮನೆಯಲ್ಲಿದ್ದ 194 ಗ್ರಾಂ ಚಿನ್ನಾಭರಣ ಮತ್ತು ಸುಮಾರು 1 ಕೆಜಿ 300 ಗ್ರಾಂ ಬೆಳ್ಳಿ ತಂದು ವಂಚಕನ ಕೈಗೆ ಒಪ್ಪಿಸಿದ್ದಾರೆ.

ಪೂಜೆ ಮುಗಿದ ಒಂದು ದಿನದಲ್ಲೇ ಒಡವೆಗಳನ್ನು ವಾಪಸ್ ನೀಡುತ್ತೇನೆ ಎಂದು ಹೇಳಿದ್ದ ಶೇಖರ್, ಒಂದು ವಾರಲ ಪೂಜೆ ಇನ್ನೂ ಮುಗಿದಿಲ್ಲ, ಅಡ್ಡಿಗಳು ಬರುತ್ತಿವೆ ಎಂದು ಹೇಳಿ ಸಮಯ ಕಳೆದಿದ್ದ. ಅನುಮಾನಗೊಂಡ ಐಟಿ ಅಧಿಕಾರಿ ಭಾರತಿನಗರದ ಶ್ರೀ ಸರ್ಕಲ್ ಬಳಿ ಹೋಗಿ ನೋಡಿದಾಗ ಆತ ಇರಲಿಲ್ಲ, ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅಧಿಕಾರಿಗೆ ತಾನು ಮೋಸ ಹೋಗಿರುವುದು ತಿಳಿದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Posts

Leave a Reply

Your email address will not be published. Required fields are marked *