ಹಾಲು ಮತದ ಕೈಯಲ್ಲಿ ಇರುವ ಅಧಿಕಾರ ಬದಲಾವಣೆ ಅಷ್ಟು ಸುಲಭವಲ್ಲ, ಬಹಳ ಕಠಿಣ ಎಂದು ಕೌಜಗೇರಿ ಗ್ರಾಮದ ಮೊಹರಂ ಹಬ್ಬದ ಆಚರಣೆ ವೇಳೆ ಅಲೈ ದೇವರು ಹೇಳಿದ್ದಾರೆ.
ಗದಗದ ರೋಣ ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ನಡೆದ ದೈವ ಕಾರ್ಣಿಕದಲ್ಲಿ ಅಲೈ ದೇವರು ಈ ವಾಣಿ ನೀಡಿದ್ದಾರೆ. ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ. ಹಾಲುಮತದ ಕೈಯಲ್ಲಿ ಅಧಿಕಾರ ಕೊಟ್ಟಿದ್ದೀರಿ. ಅದನ್ನು ಬದಲಿ ಮಾಡುವುದು ಅಷ್ಟು ಸುಲಭವಲ್ಲ. ಬಹಳ ಕಠಿಣ ಎಂದು ದೇವರು ಹೇಳಿದೆ.
ಅವರಾಗಿಯೇ ಒಲ್ಲೆ ಎಂದು ಬಿಟ್ಟರೆ ಮಾತ್ರ ಇನ್ನೊಬ್ಬರಿಗೆ ಅಧಿಕಾರ ಹೋಗುತ್ತದೆ. ನದಿ ಒಳಗೆ ಈಜು ಬರುವ ಭೂಪ ಬೇಕು. ಅಂದಾಗ ಮಾತ್ರ ಅಧಿಕಾರ ಬದಲಾವಣೆ ಆಗುತ್ತದೆ, ಇಲ್ಲಾಂದ್ರೆ ಇಲ್ಲ ಎಂದು ರಾಜ್ಯ ರಾಜಕಾರಣದ ಬಗ್ಗೆ ದೇವರು ಭವಿಷ್ಯ ನುಡಿದಿದೆ.
ಹಾಲುಮತವೆಂದರೆ ಕುರುಬ ಸಮುದಾಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಕುರುಬ ಸಮುದಾಯಕ್ಕೆ ಸೇರಿದವರು ಎಂಬುದು ಇಲ್ಲಿ ಗಮನಾರ್ಹ.
ಅಲೈ ದೇವರು ರಾಜಕೀಯ ಭವಿಷ್ಯದ ಜೊತೆಗೆ ಮಾರಕ ರೋಗದ ಬಗ್ಗೆ ಭವಿಷ್ಯ ನುಡಿದು ಮದ್ದು ಇಲ್ಲದ ರೋಗ ಹರಡಲಿದೆ ಎಂದೂ ಎಚ್ಚರಿಕೆ ನೀಡಿದೆ. ಮದ್ದು ಇಲ್ಲದ ವ್ಯಾಧಿ ಗಾಳಿ ಮುಖಾಂತರ ಹರಡುತ್ತದೆ. ಸಾಕಷ್ಟು ಸಾವು ನೋವುಗಳು ಆಗುತ್ತವೆ. ಅದು ಭೂಮಿ ಮೇಲೆ ಐದು ವರ್ಷ ಇರುತ್ತದೆ, ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
ಸಾಮಾನ್ಯರಿಗೆ ಮಾತ್ರ ರೋಗ ಅಲ್ಲ. ಆಳುವ ದೊರೆಗಳಿಗೂ ಭಯಂಕರ ರೋಗ ಕಾಡುತ್ತದೆ. ಎಚ್ಚರಿಕೆ ಹೆಜ್ಜೆ ಇಡಬೇಕು, ನಾನು ನಾನು ಅಂತ ಮೆರೆಯಬೇಡಿ, ವಾಹನ ತಗೊಂಡು ಹೋಗುವರು ತಂದೆ ತಾಯಿ ಬೇಡ ಅಂದರೆ ಬಿಟ್ಟು ಬಿಡಿ. ದೇವರ ಆಜ್ಞೆ ಮೀರಿ ಹೋಗಿದ್ದೆ ಆದರೆ ಹಾದಿಗೊಂದು ಹೆಣ. ಬೀದಿಗೊಂದು ಹೆಣ ಆಗುವುದು ಎಂದು ದೇವರು ಎಚ್ಚರಿಕೆ ನೀಡಿದೆ.