ಬೆಂಗಳೂರು: ಕರ್ನಾಟಕದ ಸಮಗ್ರ ಬೆಳವಣಿಗೆ ದೃಷ್ಠಿಯಿಂದ ಬೆಂಗಳೂರು ನಗರದ ನಾಲ್ಕು ದಿಕ್ಕಿನಲ್ಲೂ ಹೊಸ ವಿಮಾನ ನಿಲ್ದಾಣ ಸ್ಥಾಪನೆ ಅಗತ್ಯ ಎಂದು ಉದ್ಯಮಿ ಹಾಗೂ ಕ್ಯಾಪ್ಟನ್ ಗೋಪಿನಾಥ್ ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಲ್ಲಿ ಸೋಮವಾರ ಏರ್ಪಡಿಸಿದ್ದ, ಸನ್ಮಾನ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
ರಕ್ಷಣಾ ಸ್ವಾವಲಂಬನೆಯಲ್ಲಿ ಮಾಡಬೇಕಾದ ಬೇಕಾದಷ್ಟು ಕೆಲಸ ಮಾಡಲು ಬೆಂಗಳೂರು ಅತ್ಯಂತ ಪ್ರಶಸ್ತವಾಗಿದೆ. ಇದನ್ನು ಸರ್ಕಾರ ಮನಗಂಡು ಇಲ್ಲಿ ವಿಮಾನ ತರಬೇತಿ ಶಾಲೆಗಳನ್ನು ಆರಂಭಿಸಬೇಕು. ಮಹಾರಾಜರು ದೂರದೃಷ್ಟಿಯಿಂದ ಜಾಗ ಕೊಟ್ಟು ಆರಂಭಿಸಿದ ಸರ್ಕಾರಿ ವಿಮಾನ ತರಬೇತಿ ಶಾಲೆ ಇಂದು ದುರವಸ್ಥೆಯ ತಾಣವಾಗಿದೆ.
ಕಾಣದ ಕೈಗಳು ಮಹಾರಾಜರ ದೂರದೃಷ್ಠಿಯ ಪ್ರತಿಷ್ಟಿತ ಸರ್ಕಾರಿ ವಿಮಾನ ತರಬೇತಿ ಶಾಲೆಯನ್ನು ಮುಚ್ಚುವ ಪ್ರಯತ್ನಕ್ಕೆ ಒತ್ತಡಹಾಕುತ್ತಿವೆ, ಇದು ಸರಿಯಲ್ಲ. ಯಾವ ಉದ್ದೇಶಕ್ಕೆ ತರಬೇತಿ ಶಾಲೆ ಆರಂಭಿಸಲಾಗಿದೆಯೋ ಅದು ಮುಂದುವರೆಯಬೇಕು. ಲಂಡನ್ ನಗರದಲ್ಲಿ 6 ವಿಮಾನ ನಿಲ್ದಾಣಗಳಿವೆ. ಅದೇ ರೀತಿ ಹಾಂಗ್ ಕಾಂಗ್ ನಲ್ಲಿ 5 ವಿಮಾನ ನಿಲ್ದಾಣಗಳಿವೆ. ಪುಟ್ಟ ರಾಷ್ಟ್ರ ಮಾಲ್ಡೀವ್ಸ್ ನಲ್ಲಿ 2 ಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳಿವೆ. ಹೀಗಾಗಿ ರಾಜ್ಯದ ಸಮಗ್ರ ಬೆಳವಣಿಗೆ ಮತ್ತು ಯುವಕರಿಗೆ ಉದ್ಯೋಗ ಅವಕಾಶ ಈ ಎರಡೂ ಕಾರಣಗಳಿಂದ ತರಬೇತಿ ಶಾಲೆ ರಾಜ್ಯದ ಬೇರೆ ಬೇರೆ ಭಾಗದಲ್ಲೂ ಆರಂಭಿಸಬೇಕು.
ಈಗಿರುವ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಪ್ಪಂದ ಇನ್ನು 7 ವರ್ಷಗಳಿಗೆ ಕೊನೆಯಾಗಲಿದೆ. ಹೀಗಾಗಿ ಒಪ್ಪಂದ ಮುಗಿಯುವ ಮುನ್ನವೇ ಸರ್ಕಾರ ಈ ನಿಟ್ಟಿನಲ್ಲಿ ತನ್ನ ಪ್ರಯತ್ನಗಳನ್ನು ಚುರುಕುಗೊಳಿಸಬೇಕು. ಹಳೆಯ ಹೆಚ್ ಎ ಎಲ್ ವಿಮಾನ ನಿಲ್ದಾಣವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಅದಕ್ಕೆ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಅವರು ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ ಹಾಗೂ ವ್ಯವಸ್ಥಾಪಕ ನಿರ್ದೇಶಕಕಿ ದೀಪಶ್ರೀ ಕೆ ಹಾಗೂ ಇತರೆ ಸಿಬ್ಬಂದಿ ಭಾಗಿಯಾಗಿದ್ದರು.


