ಬೆಂಗಳೂರು:ರಾಜ್ಯದ ಎಲ್ಲಾ ಮಹಾನಗರ ವ್ಯಾಪ್ತಿಯ ಜಲಮಂಡಳಿಗಳಲ್ಲಿ 13 ಸಾವಿರ ಮಂದಿ ವಾಟರ್ ಮ್ಯಾನ್ ಗಳಿದ್ದು, ಇವರನ್ನ ಸರ್ಕಾರಿ ನೌಕರರನ್ನಾಗಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನಗರಾಭಿವೃದ್ದಿ ಇಲಾಖೆ ಸಚಿವ ಬೈರತಿ ಸುರೇಶ್ ವಿಧಾನಪರಿಷತ್ ನಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಹೊರಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರನ್ನ ಖಾಯಂಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಟ ವೇತನ ನೀಡಲಾಗುತ್ತಿದೆ. ಅದೇ ರೀತಿ ಬಿಬಿಎಂಪಿ ಸೇರಿದಂತೆ ರಾಜ್ಯದಲ್ಲಿ 35 ಸಾವಿರ ಮಂದಿ ಪೌರಕಾರ್ಮಿಕರಿದ್ದಾರೆ. ಸರ್ಕಾರಿ ನೌಕರರಂತೆಯೇ ಪರಿಗಣಿಸಲಾಗುತ್ತಿದೆ ಸರ್ಕಾರದಿಂದ ವಿಶೇಷ ಅನುದಾನ ನೀಡಲಾಗಿದೆ ಎಂದು ಉತ್ತರಿಸಿದರು.
ಬಿಬಿಎಂಪಿ ಹೊರತುಪಡಿಸಿ ಜಲಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಆಧಾರದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ 1504 ವಾಟರ್ ಮ್ಯಾನ್ ಗಳಿದ್ದು ಇವರ ಕೆಲಸ ಖಾಯಂ ಕೋರಿ ಪೌರಾಡಳಿತ ನಿರ್ದೇಶನಾಲಯ ಪ್ರಸ್ತಾವನೆ ಸಲ್ಲಿಸಿತ್ತು. ಆರ್ಥಿಕ ಇಲಾಖೆಯು ಹೊರಗುತ್ತಿಗೆ ನೌಕರರನ್ನ ಯಥಾಸ್ಥಿತಿಯಂತೆ ಮುಂದುವರೆಸಬೇಕು. ಅಲ್ಲದೆ ಕನಿಷ್ಠ ವೇತನ ಕಾಯ್ದೆಯಂತೆ ವೇತನ ಪಾವತಿಸಬೇಕೆಂದು ಹೇಳಿದೆ. ಹೀಗಾಗಿ ಮಹಾನಗರ ಪಾಲಿಕೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನ ಖಾಯಂ ನೌಕರರನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದರು.