ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಅಮೆರಿಕದ AST ಸ್ಪೇಸ್‌ಮೊಬೈಲ್ ನಿರ್ಮಿತ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವನ್ನು ಕಡಿಮೆ ಭೂಕಕ್ಷೆಗೆ ಸೇರಿಸುವ ಕಾರ್ಯಾಚರಣೆ ಯನ್ನು ಪೂರ್ಣಗೊಳಿಸುವಲ್ಲಿ ಇಂದು ಯಶಸ್ವಿಯಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ ಬಾಹುಬಲಿ ರಾಕೆಟ್ LVM-M6 ಬುಧವಾರ ಬೆಳಗ್ಗೆ 8:55 ಗಂಟೆಗೆ ನಭಕ್ಕೆ ಚಿಮ್ಮಿತು. ಈ ಉಪಗ್ರಹ ಕಡಿಮೆ ಭೂಕಕ್ಷೆಯನ್ನು ತಲುಪಿದ ಅತಿದೊಡ್ಡ ವಾಣಿಜ್ಯ ಸಂವಹನ ಉಪಗ್ರಹ.
ಇಸ್ರೋ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವನ್ನು ಕಡಿಮೆ ಭೂಕಕ್ಷೆಗೆ ಸೇರಿಸುವ ಮೂಲಕ, ಜಾಗತಿಕ ದೂರಸಂಪರ್ಕ ಕ್ಷೇತ್ರದಲ್ಲಿ ಮತ್ತು ಭಾರತದ ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಮೈಲಿಗಲ್ಲು ಸಾಧಿಸಿದೆ.
ಬ್ಲೂಬರ್ಡ್ ಬ್ಲಾಕ್-2 ಮಿಷನ್ ಕಾರ್ಯತಂತ್ರ ಮತ್ತು ತಾಂತ್ರಿಕ ಕಾರಣಗಳಿಗಾಗಿ ಮಹತ್ವದ್ದಾಗಿದೆ. 6.1 ಟನ್ ತೂಕವಿರುವ ಈ ಉಪಗ್ರಹ ಕಾರ್ಯಾಚರಣೆ ಜಾಗತಿಕ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ. ಇದು 223 ಚದರ ಮೀಟರ್ (ಸುಮಾರು 2,400 ಚದರ ಅಡಿ) ಅಳತೆಯ ಬೃಹತ್ ಅರೇ ಆಂಟೆನಾವನ್ನು ಹೊಂದಿದೆ.
ಬ್ಲೂಬರ್ಡ್ ಬ್ಲಾಕ್-2 ಉಪಗ್ರಹ 520 ಕಿಮೀ ಎತ್ತರದಲ್ಲಿ, 53 ಡಿಗ್ರಿ ಇಳಿಜಾರಿನೊಂದಿಗೆ ಭೂಮಿಯ ವೃತ್ತಾಕಾರದ ಕಕ್ಷೆಗೆ ಸೇರಿದೆ. ಇಸ್ರೊ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮೂಲಕ ಬಾಹ್ಯಾಕಾಶ ವಾಣಿಜ್ಯ ಒಪ್ಪಂದ ಅಡಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.


