ಕೊಪ್ಪಳದಲ್ಲಿ ಇಸ್ರೇಲ್ ದೇಶದ ಮಹಿಳೆ ಮತ್ತು ಸ್ಥಳೀಯ ಹೋಮ್ ಸ್ಟೇ ಮಾಲೀಕ ಮಹಿಳೆಯ ಮೇಲೆ ಕೆಲವು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸಂತ್ರಸ್ತೆಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಸಮೀಪದ ಎಡದಂಡೆ ಕಾಲುವೆ ಬಳಿ ಈ ಘಟನೆ ನಡೆದಿದೆ. ಮೂವರ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿ ನಾಲೆಗೆ ದೂಡಿ, ಉಳಿದ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಲಾಗಿದೆ.
ನಾಲೆಗೆ ಬಿದ್ದ ಅಮೆರಿಕ ಮೂಲದ ಡೇನಿಯಲ್ ಮತ್ತು ಮಹಾರಾಷ್ಟ್ರದ ಪ್ರಯಾಣಿಕ ಪಂಕಜ್ ಈಜಿ ದಡ ಸೇರಿದ್ದಾರೆ. ಒಡಿಶಾದ ಬಿಬಾಶ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅವರ ಮೃತದೇಹ ಪತ್ತೆಯಾಗಿದೆ.
ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕೈಗೊಂಡಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆಯರು ಸರ್ಕಾರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಪ್ಪಳದ ಕಾಲುವೆಯ ದಡದಲ್ಲಿ ದೇಶಿ ಮತ್ತು ವಿದೇಶಿ ಪ್ರವಾಸಿಗರು ನಕ್ಷತ್ರಗಳನ್ನು ವೀಕ್ಷಿಸುತ್ತಿದ್ದಾಗ ಈ ದುಷ್ಕೃತ್ಯ ನಡೆದಿದೆ.