Menu

Israel-Iran crisis: ಕದನ ವಿರಾಮ ಘೋಷಿಸಿದ ಟ್ರಂಪ್‌- ಉಭಯ ದೇಶಗಳಿಂದ ಅಧಿಕೃತ ಹೇಳಿಕೆ ಇಲ್ಲ

ಇಸ್ರೇಲ್‌ ಮತ್ತು ಇರಾನ್‌ ಮಧ್ಯೆ ಕಳೆದ 12 ದಿನಗಳಿಂದ ನಡೆಯುತ್ತಿದ್ದ ಸಂಘರ್ಷಕ್ಕೆ ಕದನ ವಿರಾಮ ಘೋಷಣೆಯಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಈ ಯುದ್ಧ ವರ್ಷಗಳ ಕಾಲ ನಡೆದು ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು. ಈ ರೀತಿ ಆಗಲಿಲ್ಲ, ದೇವರು ಜಗತ್ತನ್ನು ಆಶೀರ್ವದಿಸಲಿ. ಎಲ್ಲರಿಗೂ ಅಭಿನಂದನೆಗಳು ಎಂದು ಪೋಸ್ಟ್‌ ಮಾಡಿದ್ದಾರೆ.

ಕದನ ವಿರಾಮದ ಸಮಯದಲ್ಲಿ ಎರಡು ದೇಶಗಳು ಶಾಂತಿ ಮತ್ತು ಗೌರವದಿಂದ ಇರಬೇಕು.ಇರಾನ್ ಮೊದಲು ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 12 ಗಂಟೆಗಳ ನಂತರ ಇಸ್ರೇಲ್ ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 24 ಗಂಟೆಗಳ ನಂತರ 12 ದಿನಗಳ ಯುದ್ಧವು ಅಧಿಕೃತವಾಗಿ ಕೊನೆಗೊಳ್ಳುತ್ತದೆ ಎಂದು ಟ್ರಂಪ್‌ ಹೇಳಿದ್ದಾರೆ.

ಟ್ರಂಪ್‌ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಇಸ್ರೇಲ್‌ ಆಕ್ರಮಣವನ್ನು ನಿಲ್ಲಿಸಿದರೆ ಮಾತ್ರ ತಾನು ದಾಳಿ ಮಾಡುವುದನ್ನು ನಿಲ್ಲಿಸುತ್ತೇನೆ ಎಂದು ಇರಾನ್‌ ಹೇಳಿದೆ. ಎರಡೂ ದೇಶಗಳು ಅಧಿಕೃತವಾಗಿ ದಾಳಿ ನಿಲ್ಲಿಸುತ್ತೇವೆ ಎಂದು ಹೇಳಿಲ್ಲ. ಮೊದಲು ದಾಳಿ ನಡೆಸಿದ್ದು ಇಸ್ರೇಲ್‌, ಇಸ್ರೇಲ್‌ ಟೆಹ್ರಾನ್‌ ಮೇಲೆ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸಿದರೆ ನಾವು ದಾಳಿ ನಿಲ್ಲಿಸುವುದಾಗಿ ಇರಾನ್‌ ತಿಳಿಸಿದೆ.

ಇರಾನ್‌ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಪ್ರತಿಕ್ರಿಯಿಸಿ, ಇಸ್ರೇಲ್‌ನ ಆಕ್ರಮಣಕ್ಕೆ ಶಿಕ್ಷೆ ವಿಧಿಸಲು ನಮ್ಮ ಪ್ರಬಲ ಸಶಸ್ತ್ರ ಪಡೆಗಳ ಮಿಲಿಟರಿ ಕಾರ್ಯಾಚರಣೆಗಳು ಕೊನೆಯ ನಿಮಿಷದವರೆಗೆ ಮುಂದುವರಿದಿವೆ. . ಕೊನೆಯ ರಕ್ತದ ಹನಿಯವರೆಗೂ ಎಲ್ಲಾ ಇರಾನಿಗಳನ್ನು ರಕ್ಷಿಸಲು ನಾವು ಸಿದ್ಧರಾಗಿದ್ದೇವೆ. ಶತ್ರುಗಳ ಯಾವುದೇ ದಾಳಿಗೆ ಕೊನೆಯ ಕ್ಷಣದವರೆಗೂ ಪ್ರತಿಕ್ರಿಯಿಸುವ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *