ಇರಾನ್ ಕತಾರ್ನಲ್ಲಿರುವ ಅಮೇರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಬಳಿಕ ಮಧ್ಯಪ್ರಾಚ್ಯ ದೇಶಗಳು ವಾಯುಮಾರ್ಗ ಬಂದ್ ಮಾಡಿದ್ದರಿಂದ ಮಂಗಳೂರಿನಿಂದ ವಿಮಾನಗಳ ಹಾರಾಟ ವ್ಯತ್ಯಯಗೊಂಡಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಕದನದಲ್ಲಿ ಮಧ್ಯೆ ಪ್ರವೇಶಿಸಿದ ಅಮೆರಿಕ ಇರಾನ್ನ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಕತಾರ್ನಲ್ಲಿರುವ ಅಮೇರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಈ ಬೆಳವಣಿಗೆಯ ಬಳಿಕ ಮಧ್ಯಪ್ರಾಚ್ಯದ ದೇಶಗಳು ವಾಯುಮಾರ್ಗಗಳನ್ನು ಬಂದ್ ಮಾಡಿವೆ. ಅಲ್ಲಿನ ವಿಮಾನಯಾನ ವಲಯ ಮುಚ್ಚಿದ್ದರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮನ ನಿಲ್ದಾಣದಿಂದ ಹೊರಟಿದ್ದ ವಿಮಾನಗಳು ಮಂಗಳೂರಿಗೆ ವಾಪಸಾಗಿವೆ. ಮಂಗಳೂರಿನಿಂದ ಹೊರಟಿದ್ದ ಎರ್ ಇಂಡಿಯಾ ಎಕ್ಸ್ಪ್ರೆಸ್ ದಮ್ಮಾಮ್ಗೆ ಹೋಗುವ ಬದಲು ಮುಸ್ಕತ್ ಕಡೆ ತಿರುಗಿಸಲಾಗಿತ್ತು. ಅಬುದಾಭಿಗೆ ಹೋಗುವ ಇಂಡಿಗೋ ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗಿತ್ತು. ಎರಡೂ ವಿಮಾನಗಳು ಮಂಗಳೂರಿಗೆ ವಾಪಸ್ ಆಗಿವೆ.
ಹೀಗಾಗಿ ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಮನವಿ ಮಾಡಲಾಗಿದೆ.