ಇರಾನ್-ಇಸ್ರೇಲ್ ಸಂಘರ್ಷ ತೀವ್ರಗೊಂಡು ಅಮೆರಿಕದ ದಾಳಿಗೆ ಪ್ರತಿದಾಳಿಯಾಗಿ ಇರಾನ್ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸುತ್ತಿದೆ. ಹೀಗಾಗಿ ಕೊಲ್ಲಿ ರಾಷ್ಟ್ರಗಳಲ್ಲೂ ಆತಂಕದ ಸ್ಥಿತಿ ನಿರ್ಮಾಣಗೊಂಡಿದ್ದು, ಲಕ್ಷಾಂತರ ಭಾರತೀಯರಿಗೆ ಸಂಕಷ್ಟ ಎದುರಾಗಿದೆ. ರಾಜ್ಯದಿಂದ ಬಹಳಷ್ಟು ಪ್ರವಾಸಿಗರು ದುಬೈನಲ್ಲಿದ್ದು, ಅಲ್ಲಿಂದ ತಾಯ್ನಾಡಿಗೆ ಬರಲು ವಿಮಾನಗಳ ಹಾರಾಟ ರದ್ದುಗೊಂಡಿದ್ದು ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದಾರೆ.
ಮಗಳ ಹುಟ್ಟುಹಬ್ಬ ಆಚರಣೆಗೆಂದು ದುಬೈ ಪ್ರವಾಸಕ್ಕೆ ಹೋಗಿದ್ದ ಬೆಂಗಳೂರಿನ ದಂಪತಿ ಕಿರಣ್ ಮತ್ತು ಸುನೀತ ದುಬೈ ಪ್ರವಾಸ ಕೈಗೊಂಡಿದ್ದರು. ಬುರ್ಜ್ ಖಲೀಫಾ ಮುಂದೆ ಮಗಳ ಬರ್ತ್ಡೇ ಆಚರಿಸಿದ್ದರು. ಶನಿವಾರ ಬೆಂಗಳೂರಿಗೆ ವಾಪಸಾಗಲು ಅಬುಧಾಬಿ ಏರ್ಪೋರ್ಟ್ಗೆ ಆಗಮಿಸಿದ್ದರು. ಅಷ್ಟರಲ್ಲಿ ಕ್ಷಿಪಣಿ ದಾಳಿ ಆರಂಭಗೊಂಡು ಅಲ್ಲೇ ಸಿಲುಕಿಕೊಂಡಿದ್ದಾರೆ.
ಹಾವೇರಿ ಮೂಲದ ಟೆಕ್ಕಿ ಕುಟುಂಬ ಅಬುಧಾಬಿಯಲ್ಲಿ ಸಿಲುಕಿಕೊಂಡಿದೆ. ಅಲ್ಲಿನ ಬಾತ್ರೂಂಮೇಲ್ಛಾವಣಿ ಕುಸಿದು ಬಿದ್ದಿದೆ. ಬಾಗಿಲು ಅಲುಗಾಡುತ್ತಿವೆ ಎಂದು ಕನವಳ್ಳಿ ಗ್ರಾಮದ ಎಂಜಿನಿಯರ್ ರಾಘವೇಂದ್ರ ಕುದುರಿ ಆತಂಕ ವ್ಯಕ್ತಪಡಿಸಿದ್ದಾರೆ.
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಗಳು ಮಮತಾ ರಾಯರಡ್ಡಿ ದುಬೈನಲ್ಲಿ ಸ್ನೇಹಿತೆಯ ಮದುವೆಗೆ ಹೋಗಿದ್ದರು. ವಾಪಸ್ ಬರುವುದಕ್ಕೆ ವಿಮಾನ ಸಿಗದೆ ಅಲ್ಲೇ ಉಳಿದುಕೊಂಡಿದ್ದಾರೆ. ಪ್ರವಾಸಕ್ಕೆಂದು ತೆರಳಿದ್ದ ದುಬೈಗೆ ಪ್ರವಾಸಕ್ಕೆಂದು ಬಳ್ಳಾರಿಯಿಂದ ಹೋಗಿದ್ದ 35 ಪ್ರವಾಸಿಗರು ಅಲ್ಲಿ ಪರದಾಡುವಂತಾಗಿದೆ.
35 ಪ್ರವಾಸಿಗರಲ್ಲಿ ಒಂದೇ ಕುಟುಂಬದ 15 ಜನರು ದುಬೈನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಬಳ್ಳಾರಿಯ ಯಾಳ್ಪಿ ಪಂಪನಗೌಡ ಕುಟುಂಬ ದುಬೈ ಪ್ರವಾಸಕ್ಕೆ ತೆರಳಿದ್ದರು. ವಿಮಾನ ಹಾರಾಟ ವ್ಯತ್ಯಯದಿಂದಾಗಿ ದುಬೈನಲ್ಲೇ ಉಳಿದುಕೊಂಡಿದ್ದಾರೆ. ಚಿತ್ರದುರ್ಗದ 15 ಮಂದಿ ಕೂಡ ದುಬೈನಲ್ಲೇ ಸಿಲುಕಿಕೊಂಡಿದ್ದಾರೆ.
ಬಹ್ರೇನ್ ರಾಜಧಾನಿ ಮನಾಮರಲ್ಲಿರುವ ಕಟ್ಟಡವೊಂದರಲ್ಲಿ ಹಾಸನದ ಅಂಗಡಿಹಳ್ಳಿಯ ಪಂಜು, ಜಮುನ, ಸುರೇಂದ್ರ ಪ್ರಸಾದ್, ರತೀಶ್ ಹಾಗೂ ಮೈಸೂರು ಮೂಲದ ನೇತ್ರಾವತಿ ಉಳಿದುಕೊಂಡಿದ್ದಾರೆ. ಶಾರ್ಜಾ ವಿಮಾನ ನಿಲ್ದಾಣದಲ್ಲಿ ದಾವಣಗೆರೆ ಪ್ರವಾಸಿಗರಿದ್ದಾರೆ. ಜಗಳೂರು ತೋರಣಘಟ್ಟದ ಗ್ರಾಮದ 15 ಜನ ದುಬೈ ಪ್ರವಾಸ ಹೊರಟಿದ್ದರು.


