ಇಸ್ರೇಲ್-ಹಮಾಸ್ ನಡುವಿನ ಯುದ್ಧ ಮುಂದುವರಿದಿದ್ದು, ಗಾಜಾ ಮೇಲೆ ಇಸ್ರೇಲ್ ನಿತ್ಯ ವಾಯು ದಾಳಿ ನಡೆಸುತ್ತಲೇ ಇದೆ. ಗುರುವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ 57 ಮಂದಿ ಪ್ಯಾಲೆಸ್ತೀನಿಯನ್ನರು ಬಲಿಯಾಗಿದ್ದಾರೆ.
ಈ ಎರಡೂ ದೇಶಗಳ ನಡುವಿನ ಯುದ್ಧ ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 20 ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಇದಕ್ಕೆ ನೆತನ್ಯಾಹು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಹಮಾಸ್ ಯಾವ ನಿರ್ಧಾರಕ್ಕೂ ಬಂದಿಲ್ಲ. ಇದೇ ವೇಳೆ ಇಸ್ರೇಲ್ ಗಾಜಾ ಮೇಲೆ ವೈಮಾನಿಕ ದಾಳಿ ನಡೆಸಿದೆ.
ಟ್ರಂಪ್ ಪ್ರಸ್ತಾವನೆಯಲ್ಲಿರುವ ಕೆಲವು ಅಂಶಗಳು ಸ್ವೀಕಾರಾರ್ಹವಲ್ಲ ಎಂದು ಹಮಾಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ದಕ್ಷಿಣ ಗಾಜಾದಲ್ಲಿ ಇಸ್ರೇಲ್ ನಡೆಸಿರುವ ಗುಂಡಿನ ದಾಳಿಯಲ್ಲಿ ಕನಿಷ್ಠ 29 ಜನರು ಅಸು ನೀಗಿದ್ದಾರೆ. ಅವರಲ್ಲಿ 14 ಜನ ಇಸ್ರೇಲ್‌ನ ಸೇನಾ ಕಾರಿಡಾರ್‌ನಲ್ಲಿ ಪ್ರಾಣ ಕಲೆದುಕೊಂಡಿದ್ದಾರೆ ಎನ್ನಲಾಗಿದೆ.
ಇಸ್ರೇಲಿ ದಾಳಿಯಲ್ಲಿ 16 ಮಂದಿ ಮೃತಪಟ್ಟಿರುವುದಾಗಿ ದೇರ್ ಅಲ್-ಬಲಾಹ್‌ನಲ್ಲಿರುವ ಅಲ್-ಅಕ್ಸಾ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ದೇರ್ ಅಲ್-ಬಲಾದಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ನಡೆದ ದಾಳಿಯಲ್ಲಿ ಒಬ್ಬರು ಅಸು ನೀಗಿದ್ದು, ನಾಲ್ವರು ಗಾಯಗೊಂಡಿದ್ದರು.
ಗಾಜಾಪಟ್ಟಿಯನ್ನು ಉಗ್ರರಿಂದ ಮುಕ್ತ ಮಾಡುವುದರಿಂದ ಹಿಡಿದು ಒತ್ತೆಯಾಳುಗಳ ಬಿಡುಗಡೆವರೆಗೆ ಟ್ರಂಪ್ ಸಿದ್ಧಪಡಿಸಿರುವ ಪ್ರಸ್ತಾವನೆಯನ್ನು ಶ್ವೇತಭವನ ಬಿಡುಗಡೆ ಮಾಡಿದೆ. ಗಾಜಾದಲ್ಲಿ ಉಳಿದುಕೊಂಡವರನ್ನು ಉಗ್ರರೆಂದು ಪರಿಗಣಿಸಲಾಗುವುದು. ನೀವು ಇಸ್ರೇಲ್ನಿಂದ ದಾಳಿಗಳನ್ನು ಎದುರಿಸಬೇಕಾಗುತ್ತದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಪ್ಯಾಲೆಸ್ತೀನಿಯನ್ನರಿಗೆ ಗಾಜಾ ತೊರೆಯುವಂತೆ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಇಸ್ರೇಲ್ ಗಾಜಾ ಮೇಲೆ ನಡೆಸಿದ ದಾಳಿಯಲ್ಲಿ 16 ಮಂದಿ ಪ್ಯಾಲೆಸ್ತೀನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ತಿಂಗಳು ಗಾಜಾವನ್ನು ವಶಪಡಿಸಿಕೊಳ್ಳಲು ಇಸ್ರೇಲ್ ಪ್ರಮುಖ ದಾಳಿಯನ್ನು ಪ್ರಾರಂಭಿಸಿದ ನಂತರ 400,000 ಪ್ಯಾಲೆಸ್ತೀನಿಯನ್ನರು ಗಾಜಾ ನಗರವನ್ನು ತೊರೆದಿದ್ದಾರೆ.