ಭಾರತ ತಂಡದಿಂದ ಕಡೆಗಣಿಸಲ್ಪಟ್ಟ ಎಡಗೈ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಸಿಡಿಸಿದ ಚೊಚ್ಚಲ ಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಟಿ-20 ಟೂರ್ನಿಯ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ದಾಖಲೆಯ ಮೊತ್ತ ಪೇರಿಸಿದೆ.
ಹೈದರಾಬಾದ್ ನಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ನಲ್ಲಿ 6 ವಿಕೆಟ್ 286 ರನ್ ಕಲೆ ಹಾಕಿತು.
ಐಪಿಎಲ್ ಇತಿಹಾಸದಲ್ಲೇ ಅತೀ ದೊಡ್ಡ ಮೊತ್ತವಾಗಿದೆ. ಅಲ್ಲದೇ ಅತೀ ಹೆಚ್ಚು ಬೌಂಡರಿ ಸೇರಿದಂತೆ ಹಲವು ದಾಖಲೆಗಳನ್ನು ಬರೆಯುವ ಮೂಲಕ ಹೈದರಾಬಾದ್ ಬ್ಯಾಟಿಂಗ್ ದೈತ್ಯ ತಂಡವಾಗಿ ಮತ್ತೊಂದು ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡದಿಂದ ಕೈಬಿಡಲಾಗಿದ್ದ ಇಶಾನ್ ಕಿಶನ್ 45 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೇ 47 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್ ಸೇರಿದಂತೆ 106 ರನ್ ಬಾರಿಸಿ ಔಟಾಗದೇ ಉಳಿದರು. ಅಲ್ಲದೇ ಎರಡನೇ ವಿಕೆಟ್ ಗೆ ಟ್ರಾವಿಡ್ ಹೆಡ್ (67 ರನ್, 31 ಎಸೆತ, 9 ಬೌಂಡರಿ, 3 ಸಿಕ್ಸರ್) ಜೊತೆ 85 ರನ್ ಜೊತೆಯಾಟ ನಿಭಾಯಿಸಿದರು.