ನೆಗಡಿ ಬಂದಿದೆ ಎಂದು ಮೂಗು ಕತ್ತರಿಸಿಕೊಳ್ಳಲಾಗದು. ಲೋಕಸಭೆಯ ಪೀಠಾಧ್ಯಕ್ಷರು ಯಾವ ಪಕ್ಷಕ್ಕೂ ಸೇರಿದವರಲ್ಲ . ಈ ಕುರ್ಚಿಯಲ್ಲಿ ಕುಳಿತ ವ್ಯಕ್ತಿಗೆ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಸಮಾನವೇ. ಲೋಕ ಸದನವನ್ನು ನಿರ್ವಹಿಸುವ ಸಮಯದಲ್ಲಿ ತಮ್ಮ ಪರಿಧಿಯಲ್ಲಿ ಲಭ್ಯವಿರುವ ಅಧಿಕಾರ ಮತ್ತು ವಿವೇಚನೆಗಳನ್ನು ಬಳಸಲು ಸ್ಪೀಕರ್ ಸರ್ವಸ್ವತಂತ್ರರು.
ದೇಶದ ಲೋಕಸಭೆಯಲ್ಲಿ ಪ್ರಧಾನಿ ಭಾಷಣಕ್ಕೆ ಮತ್ತು ರಕ್ಷಣೆಗೆ ಅಪಾಯವಿತ್ತೇ.. ? ಪ್ರಜಾತಂತ್ರದಲ್ಲಿ ಈ ಜನಪ್ರತಿನಿಧಿಗಳ ಸದನವೇ ದೇವಾಲಯ. ಇದರ ಸಾರ್ವಭೌಮತ್ವ ಮತ್ತು ಸಂರಕ್ಷಣೆ ಈ ಸದನದ ಸಭಾಧ್ಯಕ್ಷರ ಸುಪರ್ದಿಗೆ ಒಳಪಡುವಂತಹದು. ಲೋಕಸಭೆಯ ಒಳಗೂ ಮತ್ತು ಹೊರಗಿನ ವ್ಯಾಪ್ತಿಯ ಆಗುಹೋಗುಗಳಿಗೆ ಸಭಾಧ್ಯಕ್ಷರೇ ಹೊಣೆಗಾರರು. ರಾಷ್ಡ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ಎರಡೂ ಸದನಗಳಲ್ಲಿ ಧನ್ಯವಾದ ಸಲ್ಲಿಸುವುದು ಸಂಪ್ರದಾಯ. ಆದರೆ ಲೋಕಸಭೆಯಲ್ಲಿ ಇದರ ಸುಗಮ ಕಲಾಪಕ್ಕೆ ಸೂಕ್ತ ವಾತಾವರಣ ಇರಲಿಲ್ಲ. ಒಂದು ರೀತಿಯಲ್ಲಿ ಆತಂಕದ ಪರಿಸ್ಥಿತಿ ಎಂಬುದನ್ನು ಸ್ಪೀಕರ್ ಓಂ ಬಿರ್ಲಾ ಅಧಿವೇಶನದ ಸಮಯದಲ್ಲಿ ಹೇಳಿದ್ದು ಕಳವಳಕಾರಿ ಎಂಬುದಕ್ಕಿಂತ ಇದು ಚರ್ಚೆ ಮತ್ತು ಜಿಜ್ಞಾಸೆಗೆ ಎಡೆಮಾಡಿಕೊಟ್ಟಿದೆ.
ಇಂತಹ ಸನ್ನಿವೇಶ ನಿರ್ಮಾಣವಾಗಬಹುದೆಂಬ ಸೂಚನೆ ಮೊದಲೇ ಇದೆಯೆಂಬುದಾದರೆ ಕಸ್ಟೋಡಿಯನ್ ಆಫ್ ದಿ ಹೌಸ್ ಆದ ಲೋಕಸಭೆ ಸ್ಪೀಕರ್, ಪ್ರಪಥಮವಾಗಿ ನಿರ್ವಹಿಸಬೇಕಿದ್ದ ಕರ್ತವ್ಯಗಳೇನು ಎಂಬುದೂ ಗಂಭೀರ ಪ್ರಶ್ನೆ ಈ ದಿಶೆಯಲ್ಲಿ ಅಹಿತಕರ ಘಟನೆಗಳನ್ನು ತಡೆಯಲು ತಮ್ಮ ಸಾಂವಿಧಾನಾತ್ಮಕ ವಿವೇಚನೆಗಳನ್ನು ಬಳಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಇವರು ಕೈಗೊಳ್ಳಬಹುದಿತ್ತಲ್ಲವೇ ಎಂಬ ಪ್ರಶ್ನೆಗಳೂ ಈಗ ಸಾರ್ವತ್ರಿಕವಾಗಿ ತಲೆಯೆತ್ತಿವೆ.
ನೆಗಡಿ ಬಂದಿದೆ ಎಂದು ಮೂಗು ಕತ್ತರಿಸಿಕೊಳ್ಳಲಾಗದು. ಲೋಕಸಭೆಯ ಪೀಠಾಧ್ಯಕ್ಷರು ಯಾವ ಪಕ್ಷದ ಸದಸ್ರರೂ ಅಲ್ಲ ! ಈ ಕುರ್ಚಿಯಲ್ಲಿ ಕುಳಿತ ವ್ಯಕ್ತಿಗೆ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಸಮಾನವೇ. ಲೋಕಸದನವನ್ನು ನಿರ್ವಹಿಸುವ ಸಮಯದಲ್ಲಿ ತಮ್ಮ ಪರಿದಿಯಲ್ಲಿ ಲಭ್ಯವಿರುವ ಅಧಿಕಾರ ಮತ್ತು ವಿವೇಚನೆಗಳನ್ನು ಇವರು ಬಳಸಲು ಸ್ಪೀಕರ್ ಸರ್ವಸ್ವತಂತ್ರರು. ಬಿಸಿನೆಸ್ ಅಡ್ವೈಸರಿ ಕಮಿಟಿ ಇರುವುದು ಸ್ಪೀಕರ್ ಚೇಂಬರಿನಲ್ಲಿ ಎರಡೂ ಪಕ್ಷಗಳ ನಾಯಕರ ಸಂಧಾನಯುಕ್ತ ಮಾತು ಕತೆಗೆ ಸಹಾಯಕವಾಗಲು. ಇಂತಹ ಸಭೆಗಳಿಗೆ ಸ್ಪೀಕರ್ ಅವರೇ ಸಂಧಾನಕಾರರು. ಬಿಎಸಿ ಸಭೆಯ ಬಳಿಕ ಇಲ್ಲಿನ ತೀರ್ಮಾನಗಳನ್ನು ಲೋಕಸದನದ ಮುಂದಿಡಲು ಇವರಿಗೆ ಯಾವ ಅಡ್ಡಿಯೂ ಇಲ್ಲ.
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಲೋಕಸಭೆಯಲ್ಲಿ ಪ್ರಧಾನಿ ಅವರಿಂದ ಉತ್ತರ ಆಗಲಿಲ್ಲ ಎಂದರೆ ಇದು ಅನ್ಪ್ರಿಸಿಡೆಂಟ್ ಆಗುವುದಿಲ್ಲವೇ? ಒಂದು ವೇಳೆ ಪ್ರಧಾನಿ ಅವರ ಭಾಷಣಕ್ಕೆ ಲೋಕಸಭೆಯಲ್ಲಿ ವಿಪಕ್ಷಗಳಿಂದ ತೀವ್ರ ಕೋಲಾಹಲ ಉಂಟಾದಾಗ ಗದ್ದಲ ಉಂಟು ಮಾಡುವವರ ವಿರುದ್ದ ಶಿಸ್ತಿನ ಕ್ರಮ ಜರುಗಿಸಲು ಸಭಾಧ್ಯಕ್ಚರಿಗೆ ಎಲ್ಲ ಅಧಿಕಾರವೂ ಉಂಟಲ್ಲವೇ? ಪ್ರಜಾ ನ್ಯಾಯಾಲಯದ ಅತ್ಯುನ್ನತ ಸ್ಥಾನದಲ್ಲಿ ಕುಳಿತು ಕೆಲಸ ನಿರ್ವಹಿಸುವ ವ್ಯಕ್ತಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಿರುವಂತಹ ಗುರುತರ ಸಾಂವಿಧಾನಿಕ ಹೊಣೆಗಾರಿಕೆ ಇರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸೋಮನಾಥ ಚಟರ್ಜಿ, ಮನೋಹರ ಜೋಶಿ ಅವರು ಇಂತಹುದೇ ಸನ್ನಿವೇಶ ಮತ್ತು ಸಮಯದಲ್ಲಿ ಈ ಹುದ್ದೆಯನ್ನು ಹೇಗೆ ನಿರ್ವಹಿಸಿ ದ್ದರೆಂಬುದೂ ಮುಖ್ಯ. ಅಡ್ಡದಾರಿ ಹಿಡಿದ ಸಂಸದರು ಯಾವ ಪಕ್ಷದವರೇ ಆಗಲಿ. ಅಂತಹವರ ಕಿವಿ ಹಿಂಡಿ ಹಿತವಚನ ನೀಡುವ ನೇರ ಮತ್ತು ನಿಷ್ಟುರ ಮತ್ತು ನಿರ್ಭೀತ ಭಾವನೆ ಸಭಾಧ್ಯಕ್ಷರಲ್ಲಿ ಅವಶ್ಯಕವಾಗಿ ಇರಬೇಕು.


