ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸ್ವಪಕ್ಷದವರು ವಿರೋಧಿಸುವ ನಾಯಕರಾಗಿದ್ದಾರೆಯೇ ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಬೆಂಗಳೂರು ಮೆಟ್ರೋ ಫೇಸ್-2 ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿರುವ ಕೇಂದ್ರ ಸರ್ಕಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೇ ವೇದಿಕೆಯಲ್ಲಿ ಜಾಗ ನೀಡುವುದನ್ನು ನಿರಾಕರಿಸಿದೆ. ಕೇಂದ್ರ ಸರ್ಕಾರ ಪ್ರೊಟೋಕಾಲ್ ಮರೆತಿದೆಯೇ? ಅಥವಾ ಉದ್ದೇಶಪೂರ್ವಕ ಕಡೆಗಣನೆಯೇ? ಮೊದಲ ಬಾರಿ ಶಾಸಕರಾಗಿರುವ ಹಾಗೂ ಬೆಂಗಳೂರಿನ ಶಾಸಕರಲ್ಲದಿರುವ ಬಿ.ವೈ.ವಿಜಯೇಂದ್ರ ಅವರಿಗೆ ಸಿಕ್ಕ ಅವಕಾಶ ಅಶೋಕ್ ಅವರಿಗೆ ಏಕಿಲ್ಲ ಎಂದು ಪ್ರಿಯಾಂಕ್ ಖರ್ಗೆ ಛೇಡಿಸಿದ್ದಾರೆ.
ಮಾನ್ಯ ಅಶೋಕ್ ಅವರೇ, ತಾವು ಬೆಂಗಳೂರು ನಗರವನ್ನು ಪ್ರತಿನಿಧಿಸಿರುವ ಶಾಸಕರಾಗಿದ್ದರೂ, ಜೊತೆಗೆ ವಿರೋಧ ಪಕ್ಷದ ನಾಯಕರಾಗಿದ್ದರೂ, ಬಿಜೆಪಿ ಪಕ್ಷದ ಹಿರಿಯ ನಾಯಕ ಎನಿಸಿಕೊಂಡಿದ್ದರೂ, ಹಲವು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರೂ ನಿಮ್ಮನ್ನು ಕಡೆಗಣಿಸಲಾಗಿದೆ ಎಂದರೆ ನಿಮ್ಮ ಕುರ್ಚಿ ಕಿತ್ತುಕೊಳ್ಳುವ ಸಂದೇಶ ಬಂದಿದೆ ಎಂದು ಭಾವಿಸೋಣವೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಶ್ನೆ ಮಾಡಿದ್ದಾರೆ.
ಯಾರು ಯಾರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿಲ್ಲ ಎಂದು ತಲೆಕೆಡಿಸಿಕೊಂಡು ಕುಳಿತಿದ್ದ ತಮಗೆ ಈಗ “ನನಗೇಕೆ ಆಹ್ವಾನವಿಲ್ಲ” ಎಂದು ತಲೆಕೆಡಿಸಿಕೊಂಡು ಕೂರುವ ಸಮಯ ಬಂದಿದೆ. ಇನ್ನಾದರೂ ಇತರರ ಮನೆ ಇಣುಕುವ ಬದಲು ನಿಮ್ಮ ಬುಡ ಅಲ್ಲಾಡುತ್ತಿರುವುದನ್ನು ಗಮನಿಸಿದರೆ ಒಳ್ಳೆಯದು! ಎಂಬ ಸಲಹೆಯನ್ನೂ ಸಚಿವರು ವಿರೋಧ ಪಕ್ಷದ ನಾಯಕರಿಗೆ ನೀಡಿದ್ದಾರೆ.