Wednesday, January 21, 2026
Menu

ಇನ್ಸ್ಪೆಕ್ಟರ್ ರವಿ ಸಸ್ಪೆಂಡ್‌ ಹಿಂದೆ ಹವಾಲಾ ನಂಟು?

ಕೊಲೆ ಪ್ರಕರಣದ ತನಿಖೆಯಲ್ಲಿ ವಿಳಂಬ ಎಂಬ ಕಾರಣಕ್ಕೆ ಅಮಾನತುಗೊಂಡಿದ್ದಾರೆ ಎನ್ನಲಾದ ಜ್ಞಾನಭಾರತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವಿ ಅವರ ಹಿಂದೆ ಕೋಟಿ ಕೋಟಿ ಹವಾಲಾ ಹಣದ ನಂಟಿರುವ ಅನುಮಾನಗಳು ವ್ಯಕ್ತವಾಗಿವೆ.

ಜನವರಿ 15ರಂದು ನಾಗರಬಾವಿ ವ್ಯಾಪ್ತಿಯಲ್ಲಿ ಹವಾಲಾ ಹಣ ವರ್ಗಾವಣೆಯಾಗುತ್ತಿದೆ ಎಂಬ ಖಚಿತ ಮಾಹಿತಿ ಇನ್ಸ್ಪೆಕ್ಟರ್ ರವಿ ಅವರಿಗೆ ಲಭಿಸಿತ್ತು. ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಆರೋಪಿಗಳನ್ನು ಹಿಡಿಯಲು ರವಿ ಮತ್ತು ತಂಡ ಕಾರ್ಯಾಚರಣೆಗೆ ಇಳಿದಿತ್ತು. ಪೊಲೀಸರನ್ನು ಕಂಡೊಡನೆ ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಲು ಯತ್ನಿಸಿದ್ದರು. ಇನ್ಸ್ಪೆಕ್ಟರ್ ರವಿ ಅವರು ತಮ್ಮ ವ್ಯಾಪ್ತಿ ಮೀರಿ ಆರೋಪಿಗಳನ್ನು ನೈಸ್ ರಸ್ತೆಯವರೆಗೆ ಬೆನ್ನಟ್ಟಿದ್ದರು.  ಆರೋಪಿಗಳು ನೈಸ್ ರಸ್ತೆಯ ಮೂಲಕ ತಮಿಳುನಾಡಿನತ್ತ ಪಾರಾಗಲು ಯತ್ನಿಸುತ್ತಿದ್ದಾಗ ರವಿ ಹುಳಿಮಾವು ಇನ್ಸ್ಪೆಕ್ಟರ್ ಕುಮಾರಸ್ವಾಮಿ ಸಹಾಯ ಕೋರಿದ್ದರು.

ಇಬ್ಬರೂ ಇನ್ಸ್ಪೆಕ್ಟರ್‌ಗಳು ಜಂಟಿ ಕಾರ್ಯಾಚರಣೆ ನಡೆಸಿ ನೈಸ್ ಟೋಲ್ ಬಳಿ ಕಾರನ್ನು ತಡೆಹಿಡಿದಿದ್ದರು. ಕಾರನ್ನು ತಪಾಸಣೆ ನಡೆಸಿದಾಗ 1 ಕೋಟಿ 5 ಲಕ್ಷ ರೂಪಾಯಿ ಹವಾಲಾ ಹಣ ಪತ್ತೆಯಾಗಿತ್ತು. ಹವಾಲಾ ಹಣದ ಮೊತ್ತ ಇದಕ್ಕಿಂತಲೂ ಹಚ್ಚಾಗಿದ್ದು, ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಗರ ಪೊಲೀಸ್ ಆಯುಕ್ತರು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ರವಿ ಅವರನ್ನು ಅಮಾನತುಗೊಳಿಸಿದ್ದಾರೆ.

ಜ್ಞಾನಭಾರತಿ ಇನ್ಸ್ಪೆಕ್ಟರ್ ರವಿ ಹವಾಲ ಹಣ ಪ್ರಕರಣದಲ್ಲಿ ದೂರುದಾರರಾಗಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ದಾಖಲಾಗಿರುವ ಹಣಕ್ಕೂ ಸಿಕ್ಕಿರುವ ಹಣಕ್ಕೂ ವ್ಯತ್ಯಾಸವಿದೆಯೇ ಎಂಬ ತನಿಖೆ ನಡೆಯುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತರು, ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿಗೆ ಸೂಚಿಸಿದ್ದಾರೆ.

ಕಾರಿನಲ್ಲಿದ್ದ ಸಿದ್ದಾರ್ಥ, ಸಾಂಬಶಿವ ಮತ್ತು ದಿನೇಶ್ ಎಂಬ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಹವಾಲಾ ದಂಧೆಯ ಹಿಂದೆ ಯಾರಿದ್ದಾರೆ, ಇನ್ಸ್ಪೆಕ್ಟರ್ ಅಮಾನತು ಹಿಂದೆ ಹವಾಲಾ ಹಣದ ಕಿತ್ತಾಟವಿದೆಯೇ ಅಥವಾ ತನಿಖಾ ವೈಫಲ್ಯ ಅಮಾನತಿಗೆ ಕಾರಣವೇ ಎಂಬುದು ಡಿಸಿಪಿ ವರದಿ ಬಂದ ಬಳಿಕ ತಿಳಿಯಬೇಕಿದೆ.

ಕಳೆದ ವರ್ಷದ ಸೆಪ್ಟೆಂಬರ್​ನಲ್ಲಿ ಮಲ್ಲತ್ತಹಳ್ಳಿಯಲ್ಲಿ ಅನ್ನಪೂರ್ಣೇಶ್ವರಿನಗರ ನಿವಾಸಿ ದೀಪಕ್ ರಾಜ್ ಎಂಬ ಯುವಕನ ಹತ್ಯೆಯಾಗಿತ್ತು. ಜ್ಞಾನಭಾರತಿ ಠಾಣಾಧಿಕಾರಿ ರವಿ ಈ ಕೇಸ್ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿ ರಲಿಲ್ಲ. ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ವೇಳೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ ಎಂಬುದು ಗೊತ್ತಾಗಿ ಮತ್ತೆ ಇದೇ ಠಾಣೆಗೆ ಕೇಸ್​ ವರ್ಗಾವಣೆ ಮಾಡಿದ್ದರು. ಸೆ.13ರಂದು ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ಆರೋಪದಡಿ ಇನ್ಸ್ಪೆಕ್ಟರ್ ರವಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಡಿಸಿಪಿ ವರದಿ ನೀಡಿದ್ದರು.

Related Posts

Leave a Reply

Your email address will not be published. Required fields are marked *