‘ತಾನೊಂದು ಬಗೆದರೆ ಮಾನವ, ಬೇರೊಂದು ಬಗೆವುದು ದೈವ’ ಎನ್ನುತ್ತಾರಲ್ಲ. .ಹಾಗೆ ಜತನದಿಂದ ಕೂಡಿಟ್ಟ ಭವಿಷ್ಯದ ಕನಸುಗಳೆಲ್ಲ ಯಾರೋ ಹಾಕಿದ ದಾಳಕ್ಕೆ ನುಚ್ಚುನೂರಾಗಿ ಭ್ರಮನಿರಸನಗೊಳಿಸುತ್ತವೆ. ಬದುಕನ್ನು ಎಷ್ಟೇ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕೆಂದು ಹಿಡಿತದಿಂದ ಬಾಳುವೆ ಮಾಡಿದರೂ ಹಾಸಿಗೆಯ ಹೊರಗೆ ಕಾಲು ಇಣುಕಿ ಬಿಡುತ್ತವೆ. ಹಾಗಿದ್ದರೆ ಬದುಕಿನ ಈ ಕಳೆಯುವ ಕೂಡುವ ಲೆಕ್ಕವನ್ನು ಸರಿಪಡಿಸುವ ಕ್ಯಾಲ್ಕುಲೇಟರ್ ಇಲ್ಲವೆ? ಅದನ್ನೇ ಹೇಳಹೊರಡುತ್ತದೆ, ಟಿ. ಎಸ್. ಗೊರವರ ಅವರ ಕವಿತೆ.
ಕಥೆಗಾರ, ಸಂಗಾತ ಸಾಹಿತ್ಯ ಪತ್ರಿಕೆಯ ಸಂಪಾದಕ ಟಿ.ಎಸ್.ಗೊರವರ ಸಾಹಿತ್ಯ ಲೋಕದಲ್ಲಿ ಈಗಾಗಲೇ ತಮ್ಮ ವಿನೂತನ ಬರವಣಿಗೆ ಶೈಲಿಯಿಂದಲೇ ಗುರುತಿಸಿಕೊಂಡಿದ್ದಾರೆ. ಗ್ರಾಮೀಣ ಸೊಗಡಿನ, ದಟ್ಟ ಅನುಭವಗಳ ಕಥಾನಕವನ್ನು ಕಟ್ಟಿ ಕೊಡುತ್ತಾ ಓದುಗರನ್ನು ಆಪ್ತವಾಗಿ ಸೆಳೆದುಕೊಂಡಿದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದವರಾದ ಟಿ. ಎಸ್. ಗೊರವರ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಭ್ರಮೆ, ಕುದರಿ ಮಾಸ್ತರ, ಮಲ್ಲಿಗೆ ಹೂವಿನ ಸಖ ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ ಅನುಭವ ಕಥನ, ರೊಟ್ಟಿ ಮುಟಗಿ ಕಾದಂಬರಿ, ಹಸಿರು ಟವೆಲ್ ರೈತನೊಬ್ಬನ ಜೀವನ ಕಥನ, ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ ಗದ್ಯ ಕವಿತೆಗಳು ಅವರ ಪ್ರಕಟಿತ ಸಂಕಲನಗಳು. ಸಂಗಾತ ಪ್ರಕಾಶನದ ಮೂಲಕ ಅನೇಕ ಹೊಸ ಬರಹಗಾರರ ಕೃತಿಗಳನ್ನು ಪ್ರಕಟಣೆ ಮಾಡುತ್ತಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ದ.ರಾ. ಬೇಂದ್ರೆ ಗ್ರಂಥ ಬಹುಮಾನ, ಅರಳು ಪ್ರಶಸ್ತಿ ಇವರ ಬರವಣಿಗೆಗೆ ಸಂದ ಗೌರವ ಸಮ್ಮಾನಗಳಾಗಿವೆ. ಪ್ರಜಾವಾಣಿ, ಕನ್ನಡಪ್ರಭ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ.
ಯಾವ ಕ್ಯಾಲ್ಕುಲೇಟರೂ
ಸರಿ ಮಾಡದ ಲೆಕ್ಕ
ಬದುಕು ನಡೆಸಲು
ಎಷ್ಟೊಂದು ಲೆಕ್ಕಾಚಾರ?
ಆದರೂ,
ಎಲ್ಲೊ ತಪ್ಪಿ ಹೋಗುತ್ತದೆ
ಮೂರಾಬಟ್ಟೆ ಮಾಡಿಕೊಳ್ಳುವುದು
ಯಾರಿಗೂ ಬೇಕಿರುವುದಿಲ್ಲ
ಆದರೂ,
ಮುರಿದು ಹೋಗುತ್ತದೆ
ಒಮ್ಮೊಮ್ಮೆ
ಒಣ ದಂಟಿನಂತೆ
ಚೆಲ್ಲಿ ಹೋಗಬಾರದೆಂದು
ರಾಶಿಯ ಕಾಳನು
ಜತನದಿಂದ ಗೋಣಿ ಚೀಲದಲಿ ತುಂಬುತ್ತೇವೆ,
ತೂತು ಮಾಡಿ ಹಾಳು ಮಾಡುತ್ತವೆ
ಕೀಟವೊ, ಇರುವೆಯೊ, ಇಲಿಯೊ
ನಾವು ದುಡಿದೂ ದುಡಿದೂ
ದಣಿಯುತ್ತೇವೆ,
ಹರಾಮಿಕೋರರು
ಬೆವರಿಗೂ
ನಯಾಪೈಸೆ ಬೆಲೆ ಇಲ್ಲದಂತೆ ಮಾಡುತ್ತಾರೆ
ಆಶಿಸುತ್ತೇವೆ;
ಎಂದೆಂದಿಗೂ ಆರಾಮಿರಬೇಕೆಂದು
ಇದು ಆಗುವದಲ್ಲ, ಹೋಗುವದಲ್ಲ
ಪುಡಿಗೊಳ್ಳಬಹುದೆ ಯಾವತ್ತಾದರೂ
ನಮ್ಮ ಅಹಂಮಿನ ಗೋಡೆಗಳು?
ತಪ್ಪಿ ಹೋಗುವ
ತಪ್ಪುತ್ತಲೇ ಹೋಗುವ ಈ ಲೆಕ್ಕವನು
ಸರಿ ಮಾಡಲು ಸಿಗಲಾರದು
ಯಾವ ಕ್ಯಾಲ್ಕುಲೇಟರೂ
-ಟಿ. ಎಸ್. ಗೊರವರ
ಬದುಕೊಂದು ಅನಿರೀಕ್ಷಿತ ತಿರುವುಗಳ ಸಂತೆ, ಇಲ್ಲಿ ಯಾವಾಗ ಏನಾಗುವುದೋ ಗೊತ್ತೇ ಆಗುವುದಿಲ್ಲ. ಏನೇ ಅಳೆದು, ತೂಗಿ ಲೆಕ್ಕಾಚಾರ ಹಾಕಿದರೂ ನಾವಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ‘ತಾನೊಂದು ಬಗೆದರೆ ಮಾನವ, ಬೇರೊಂದು ಬಗೆವುದು ದೈವ’ ಎನ್ನುತ್ತಾರಲ್ಲ. .ಹಾಗೆ ಜತನದಿಂದ ಕೂಡಿಟ್ಟ ಭವಿಷ್ಯದ ಕನಸುಗಳೆಲ್ಲ ಯಾರೋ ಹಾಕಿದ ದಾಳಕ್ಕೆ ನುಚ್ಚುನೂರಾಗಿ ಭ್ರಮನಿರಸನಗೊಳಿಸುತ್ತವೆ. ಬದುಕನ್ನು ಎಷ್ಟೇ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳ ಬೇಕೆಂದು ಹಿಡಿತದಿಂದ ಬಾಳುವೆ ಮಾಡಿದರೂ ಹಾಸಿಗೆಯ ಹೊರಗೆ ಕಾಲು ಇಣುಕಿ ಬಿಡುತ್ತವೆ. ಹಾಗಿದ್ದರೆ ಬದುಕಿನ ಈ ಕಳೆಯುವ ಕೂಡುವ ಲೆಕ್ಕವನ್ನು ಸರಿಪಡಿಸುವ ಕ್ಯಾಲ್ಕುಲೇಟರ್ ಇಲ್ಲವೆ? ಅದನ್ನೇ ಹೇಳಹೊರಡುತ್ತದೆ, ಟಿ. ಎಸ್. ಗೊರವರ ಅವರ ಕವಿತೆ. ಬದುಕಿನ ಲೆಕ್ಕಾಚಾರಗಳೇ ಬುಡಮೇಲಾಗುವ, ಒಣ ದಂಟಿನಂತೆ ಮುರಿದು ಮೂರಾಬಟ್ಟೆಯಾಗುವ, ಜತನದಿಂದ ಕೂಡಿಟ್ಟದ್ದು ಇನ್ಯಾರದ್ದೋ ಪಾಲಾಗುವ, ಎಂದೆಂದಿಗೂ ಸಿಗದ ನೆಮ್ಮದಿಯ ಹಿಂದೆ ಅಲೆಯುವ ಸಂಗತಿಗಳ ಕುರಿತಾಗಿ ಕವಿತೆ ದನಿಯಾಗುತ್ತದೆ.
ನಾವೆಷ್ಟೇ ಲೆಕ್ಕಾಚಾರವನ್ನು ಹಾಕಿ ಹಿಡಿತದಿಂದ ಬಾಳುವೆ ನಡೆಸಲು ಪ್ರಯತ್ನಿಸಿದರೂ ಲೆಕ್ಕ ತಪ್ಪಿ ಹೋಗಿ ಬೇಸ್ತು ಬೀಳುವಂತಾಗುತ್ತದೆ. ಯಾರಿಗೂ ಕೂಡಾ ಬದುಕನ್ನು ಬೀದಿಗೆ ತಂದು ನಿಲ್ಲಿಸುವುದು ಬೇಕಿರುವುದಿಲ್ಲ. ಆದರೂ ಗಾಳಿಗೆ ಸಿಕ್ಕ ತರೆಗೆಲೆಯಂತೆ ಉದುರಿ ಹೋಗುತ್ತದೆ, ಒಮ್ಮೊಮ್ಮೆ ಒಣದಂಟಿನಂತೆ ಮುರಿದೂ ಹೋಗುತ್ತದೆ. ರೈತ ರಾಶಿ ಮಾಡಿದ ಎಲ್ಲ ಕಾಳುಗಳನ್ನೂ ಪ್ರೀತಿಯಿಂದ ಚೀಲದಲ್ಲಿ ತುಂಬಿ ಕಾಪಿಡುತ್ತಾನೆ. ಆದರೆ ಇಲಿ, ಹೆಗ್ಗಣ, ಕೀಟ, ಇರುವೆಗಳು ತೂತು ಮಾಡಿ ಹಾಳು ಮಾಡುತ್ತವೆ. ವರ್ಷವಿಡೀ ದುಡಿದು ದಣಿದು ಗಳಿಸಿದ ಬೆಳೆಗೆ ಬೆಲೆಯೇ ಇಲ್ಲದಂತೆ ಮಾಡುವ ಹರಾಮಿಕೋರರು ಬೆವರನ್ನು ಮಣ್ಣುಪಾಲು ಮಾಡುತ್ತಾರೆ. ಅಂದುಕೊಳ್ಳುತ್ತೇವೆ, ಸದಾಕಾಲ ನೆಮ್ಮದಿಯಾಗಿರಬೇಕೆಂದು. ಆದರೆ ಯಾರ ಬದುಕಿನಲ್ಲಿಯೂ ನೆಮ್ಮದಿ ತಳವೂರಿ ನಿಂತಿದ್ದು ನೋಡಿಯೇ ಇಲ್ಲ. ಸಾವಿಲ್ಲದ ಮನೆಯ ಸಾಸಿವೆ ಕಾಳು ಹೇಗೆ ಸಿಗುವುದಿಲ್ಲವೋ, ಹಾಗೆಯೇ ನೆಮ್ಮದಿಯಿಂದಿರುವ ಒಬ್ಬ ಮನುಷ್ಯನೂ ಭೂಮಿಯ ಮೇಲೆ ದೊರಕುವುದಿಲ್ಲ. ಯಾಕೆ ಹೀಗೆ? ಎಂದರೆ… ನಮ್ಮ ನಡುವೆ ಅಹಂನ ಗೋಡೆಗಳು ಬೆಳೆದಿವೆ, ಹೊಂದಾಣಿಕೆ ಕಷ್ಟ ಸಾಧ್ಯವಾಗುತ್ತಿದೆ. ಎಂದಾದರೂ ಹಬ್ಬಿ ನಿಂತಿರುವ ಈ ಅಹಂನ ಗೋಡೆಗಳು ಧರೆಗುರುಳಬಹುದೆ? ಇಲ್ಲ. ಹಾಗಿದ್ದ ಮೇಲೆ, ಎಷ್ಟೇ ಸರಿಪಡಿಸಲೆತ್ನಿಸಿದರೂ ತಪ್ಪಿ ಹೋಗುವ, ತಪ್ಪುತ್ತಲೇ ಇರುವ ಬದುಕಿನ ಲೆಕ್ಕವನ್ನು ಸರಿಪಡಿಸಲು ಯಾವ ಕ್ಯಾಲ್ಕುಲೇಟರೂ ಸಿಗಲಾರದು.
ಎಲ್ಲರ ಬದುಕಿನ ಸರ್ವಕಾಲಿಕ ಸತ್ಯದ ಅನಾವರಣ ಈ ಕವಿತೆಯಲ್ಲಾಗಿದೆ. ಬೆವರಿಗೆ ಬೆಲೆ, ಬದುಕಿಗೆ ನೆಮ್ಮದಿ, ಬಾಳಿನ ಲೆಕ್ಕದ ಸರಿದೂಗುವಿಕೆ, ಅಹಂಗೆ ಕೊನೆ ಸಿಗಲೆಂಬುದೇ ಕವಿಯ ಹಾರೈಕೆಯಾಗಿದೆ. ಒಳ್ಳೆಯ ಕವಿತೆ ನೀಡಿದ ಕವಿಗೆ ನಮನಗಳು.
-ನಾಗೇಶ ನಾಯಕ, ವಿಮರ್ಶಕರು