ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯ ಸಾವಿನ ತನಿಖೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿರುವ ತಿಮರೋಡಿ ಮಹೇಶ್ ಶೆಟ್ಟಿಯವರ ಜೊತೆ ಅವರ ಮನೆಯಲ್ಲೇ ಈಗ ಎಸ್‌ಐಟಿ ವಿಚಾರಣೆಯಲ್ಲಿರುವ ಚಿನ್ನಯ್ಯ 2023 ರ ಆಗಸ್ಟ್ ನಲ್ಲಿ ಮಾತನಾಡಿರುವ ವೀಡಿಯೊ ಸಂಚಲನ ಸೃಷ್ಟಿಸಿದೆ.
ಆಗ ತಿಮರೋಡಿ ಮನೆಗೆ ಮೊದಲ ಬಾರಿ ಭೇಟಿ ನೀಡಿದ್ದ ಚಿನ್ನಯ್ಯ ಚೆನ್ನೈ ಮೂಲದ ಸ್ವಾಮೀಜಿಯ ಕತೆ ಹೇಳಿದ್ದ. ಚೆನ್ನೈ ಮೂಲದ ಸ್ವಾಮೀಜಿ ಕನ್ಯಾಡಿ ಬಳಿ ಜಾಗ ತಗೊಂಡಿದ್ದರು. ಆ ಸ್ವಾಮೀಜಿ ಗೆ ಧರ್ಮಸ್ಥಳದಿಂದ ಊಟ ಕಳಿಸುತ್ತಿದ್ದರು. ಆ ಸ್ವಾಮೀಜಿ ಸಾವಿನ ಬಳಿಕ ಅವರ ಜಾಗವನ್ನು ಇವರು ತಮ್ಮದಾಗಿಸಿಕೊಂಡರು ಎಂದು ಹೇಳಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಆ ಜಾಗದಲ್ಲೂ ಸಾಕಷ್ಟು ಹೆಣ ಹೂತು ಹಾಕಿದ್ದೇವೆ ಎಂದು ಚಿನ್ನಯ್ಯ ಹೇಳಿದ್ದು, ಮಹಿಳೆಯೊಬ್ಬರಿಗೆ ಆಸಿಡ್ ಹಾಕಿ ಕೊಂದಿರುವ ಬಗ್ಗೆಯೂ ಮಾತನಾಡಿದ್ದಾರೆ. ಮಹಿಳೆಯ ಮುಖಕ್ಕೆ ಪೇಪರ್ ಹಾಕಿ ಆಸಿಡ್ ಹಾಕಿ ಸುಟ್ಟಿದ್ದರು.
ಧರ್ಮಸ್ಥಳ ದ್ವಾರದ ಬಳಿ ಹೆಣ ಇರಿಸಿದ್ದರು. ಅದನ್ನು ಮಲೆಕುಡಿಯ ಶಿವಪ್ಪ ಎಂಬವರ ಮನೆ ಬಳಿ ಹಾಕಿದ್ದರು ಎಂದು ಹೇಳಿದ್ದಾನೆ.
ಒಬ್ಬರು ತಮ್ಮ ಕಡೆಯವರ ಶವ ಹುಡುಕಿಕೊಂಡು ಬಂದಿದ್ದರು. ಪೊಲೀಸರ ಬಳಿ ವಿಚಾರಿಸಿದಾಗ ಅದು ಅನಾಥ ಶವ ಅಂತು ಹೂತು ಹಾಕಿದ್ದೇವೆ ಅಂದರು, ಅದನ್ನು ಈಗ ತಗೆಯಲು ಸಾಧ್ಯವಿಲ್ಲ ಎಂದು ವಾಪಸ್ ಹೋಗಲು ಹೇಳಿದರು. ಅವರು ಅತ್ತುಕೊಂಡು ವಾಪಾಸ್ ಹೋದರು ಎಂದು ಚಿನ್ನಯ್ಯ ತಿಮರೋಡಿಯವರ ಬಳಿ ಹೇಳಿಕೊಂಡಿದ್ದಾನೆ. ತಿಮರೋಡಿ ಮತ್ತು ಚಿನ್ನಯ್ಯ ಮಧ್ಯೆ ನಡೆದಿರುವ ಮಾತುಕತೆಯ ಕೆಲವು ವೀಡಿಯೊಗಳು ಈಗಾಗಲೇ ಬಿಡುಗಡೆಯಾಗಿದ್ದು, ಹಲವು ಪ್ರಕರಣಗಳ ಬಗ್ಗೆ ಚಿನ್ನಯ್ಯ ಮಾತನಾಡಿರುವುದು ಅವುಗಳಲ್ಲಿ ದಾಖಲಾಗಿವೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡೀಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದು, ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಒಂದು ವರ್ಷದ ಅವಧಿಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಲಾಗುತ್ತಿದೆ. ತಿಮರೋಡಿ ಮೇಲೆ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಚೆನ್ನಯ್ಯನಿಗೆ ಆಶ್ರಯ ನೀಡಿದ್ದ ಆರೋಪವಿದೆ.