ಉಪಲೋಕಾಯುಕ್ತ ನ್ಯಾ.ವೀರಪ್ಪ, ರಾಜ್ಯದ ಜನತೆಯಿಂದು ಪ್ರತಿ ಕ್ಷಣವೂ ಎದುರಿಸುತ್ತಿರುವ ನೂರೊಂದು ಸಮಸ್ಯೆಗಳ ಪಬ್ಲಿಕ್ ಹಿಯರಿಂಗ್ ಆರಂಭಿಸಿದ್ದಾರೆ. ಸರ್ಕಾರಿ ಕಚೇರಿಗಳ ಹದ್ದು ಮೀರಿದ ಲಂಚದ ಕಣ್ಣುಮುಚ್ಚಾಲೆಯಾಟಕ್ಕೆ ಉಪಲೋಕಾಯುಕ್ತರೀಗ ಶಾಕ್ ಟ್ರೀಟ್‌ಮೆಂಟ್ ನೀಡಬೇಕಿದೆ.
ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ರಾಜ್ಯದ ಹಲವೆಡೆ ಪಬ್ಲಿಕ್ ಆಗಿ ಕಾಣಿಸಿಕೊಂಡು ಸದ್ದು ಮಾಡಿದ್ದಾರೆ. ಸಾರ್ವಜನಿಕ ದೃಷ್ಟಿಯಿಂದ ಇದೊಂದು ಸಕಾರಾತ್ಮಕ ವಿದ್ಯಮಾನ. ಲೋಕಾಯುಕ್ತ ಕಾಯಿದೆ ಪ್ರಕಾರ ಅವರು ಏನನ್ನು ಮಾಡಬೇಕಿದೆಯೋ, ಅಕ್ಷರಶಃ ಅದನ್ನೇ ಕೈಗೆತ್ತಿಕೊಂಡಿದ್ದಾರೆ. ಏಕೆಂದರೆ ಭ್ರಷ್ಟರು, ಲಂಚಕೋರರು ಮತ್ತು ವಂಚಕ ಅಧಿಕಾರಿಗಳು ಪಬ್ಲಿಕ್ ಅನ್ನು ಕಿತ್ತು ತಿನ್ನುತ್ತಿರುವಾಗ ಅಂತಹ ಅಧಿಕಾರಿಗಳನ್ನು ಬೀದಿಯಲ್ಲಿ (ಪಬ್ಲಿಕ್ ಆಗಿ) ನಿಲ್ಲಿಸಿ ಪ್ರಶ್ನಿಸುವ ಮತ್ತು ಸ್ಥಳದಲ್ಲಿಯೇ ನೊಂದವರಿಗೆ ಮತ್ತು ಶೋಷಿತರಿಗೆ ಪರಿಹಾರ ಕಲ್ಪಿಸುವ ಸೊಮೋಟೋ ಅಧಿಕಾರ (ಸ್ವಪ್ರೇರಿತ) ಈ ರಾಜ್ಯದ ಉಪಲೋಕಾಯುಕ್ತರಿಗೆ ಇದೆ. ಲೋಕಾಯುಕ್ತ ಅಥವಾ ಉಪಲೋಕಾಯುಕ್ತ ಹುದ್ದೆಗಳು ಕೇವಲ ಅಲಂಕಾರಿಕ ಹುದ್ದೆಗಳಲ್ಲ . ಇದನ್ನು ಇಡೀ ದೇಶಕ್ಕೆ ಮೊಟ್ಟ ಮೊದಲು ಮನದಟ್ಟು ಮಾಡಿದವರು ನ್ಯಾ. ಎನ್. ವೆಂಕಟಾಚಲ( 2001-06 ) ಮತ್ತು ನ್ಯಾ. ಸಂತೋಷ್ ಹೆಗ್ಡೆ (2006-11).
ಒಂದು ಕಡೆ ತಮ್ಮದೆ ಪಕ್ಷದ ಹಿತಾಸಕ್ತಿ ಮತ್ತು ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ಪ್ರತಿ ಕ್ಷಣವೂ ಹಪಾಹಪಿಸುತ್ತಿರುವ ಮಂತ್ರಿಗಳು ! ಇದನ್ನೇ ತಮ್ಮ ಸ್ವಲಾಭ ಮತ್ತು ಸ್ವಹಿತಾಸಕ್ತಿಗಾಗಿ ಬಳಸಿಕೊಂಡು ರಾಜ್ಯಾಡಳಿತವನ್ನು ಗಾಳಿಗೆ ತೂರಿದ ಅಧಿಕಾರಶಾಹಿ! ಸರ್ಕಾರದ ಲೋಪಗಳನ್ನು ಕ್ರಿಯಾತ್ಮಕವಾಗಿ ಬೊಟ್ಟು ಮಾಡಿ ಅದನ್ನು ಸರಿದಿದ್ದಲು ಕೈಲಾಗದಂತಹ ವಿರೋಧ ಪಕ್ಷ! ಕ್ಷೇತ್ರದ ಜನತೆಯ ಕುಂದುಕೊರತೆಗಳನ್ನು ಕಿವಿಗೆ ಹಾಕಿಕೊಳ್ಳದೆ ಬೆಂಗಳೂರಿನಲ್ಲಿಯೇ ಠಿಕಾಣಿ ಹಾಕಿದ ಜನಪ್ರತಿನಿಧಿ! ಇಂತಹ ಸನ್ನಿವೇಶದಲ್ಲಿ ರಾಜ್ಯದ ಗ್ರಾಮ, ಹೋಬಳಿ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮಡುಗಟ್ಟಿದ ನೂರೊಂದು ಪಬ್ಲಿಕ್ ಸಮಸ್ಯೆಗಳನ್ನು ಯಾರು ಕೇಳಬೇಕು? ಜನತೆಯ ಅರಣ್ಯರೋಧನ ಹಾಗೂ ಸಾವಿರ ಬವಣೆ ವಿಧಾನಸೌಧಕ್ಕೆ ಸರಿಯಾಗಿ ಮುಟ್ಟಿಸಬೇಕರುವ ಮೀಡಿಯಾ ಕೂಡಾ ಇಂದು ನೆಲ ಕಚ್ಚಿರುವುದು ಒಂದು ದುರಂತ.
ಹಳ್ಳಿ ಮತ್ತು ತಾಲೂಕುಗಳಲ್ಲಿ ಸಮಸ್ಯೆಗಳಿವೆ. ಆದರೆ ಅವುಗಳನ್ನು ಪರಿಶೀಲಿಸಿ ಸಕಾಲದಲ್ಲಿ ಪರಿಹಾರ ನೀಡಬೇಕಿರುವ ಸರ್ಕಾರಿ ಸ್ಥಳೀಯ ಅಧಿಕಾರಿಗಳಂತೂ ತಮ್ಮ ಹೆಡ್ ಕ್ವಾರ್ಟರ್ಸ್‌ನಲ್ಲಿ ಇರುವುದಿಲ್ಲ . ಒಂದು ವೇಳೆ ಇದ್ದರೂ ಸಾರ್ವಜನಿಕರ ಅಹವಾಲುಗಳನ್ನು ಖುದ್ದಾಗಿ ಆಲಿಸಿ ಅದಕ್ಕೆ ಪರಿಹಾರ ಸೂಚಿಸುವ ಪುರುಸೊತ್ತು ಅವರಿಗಿಲ್ಲ. ತಮ್ಮ ಆಫೀಸುಗಳಿಗೇ ಬಾರದೆ ಐಪಿಎಲ್ ಕ್ರಿಕೆಟ್ ಮ್ಯಾಚುಗಳನ್ನು ನೋಡುವುದರಲ್ಲಿಯೋ ಅಥವಾ ವಂಡರ್‌ಲ್ಯಾಂಡ್ ಮತ್ತು ಡಿಸ್ನಿ ಲ್ಯಾಂಡ್‌ನಲ್ಲಿ ತಮ್ಮ ಹೆಂಡತಿ ಮಕ್ಕಳ ಜೊತೆ ವಿಹಾರ ಮಾಡುವ ಕರ್ತವ್ಯಭ್ರಷ್ಟ ಅಧಿಕಾರಿಗಳ ಲೆಕ್ಕ ಜಮಾ ಮಾಡಿದರೆ ಅದು ಬಹಳ ದೊಡ್ಡ ಪಟ್ಟಿಯೇ ಆದೀತು. ಗೌರ್ನಮೆಂಟ್ ಸರ್ವೆಂಟ್ಸ್‌ಗೆ ಸರ್ಕಾರ ಲಕ್ಷಗಟ್ಟಳೆ ಸಂಬಳ, ಸಾರಿಗೆ ಮತ್ತು ಭತ್ಯೆ ಹೆಸರಿನಲ್ಲಿ ಖಜಾನೆಯಲ್ಲಿರುವ ತನ್ನ ಬಹುಪಾಲಿನ ದುಡ್ಡನ್ನು ಖಾಲಿ ಮಾಡುತ್ತಿದೆ.
ಜಿಲ್ಲೆಗೆ ನಿಯೋಜನೆ ಆಗಿರುವ ಮೂವರು ಪ್ರಮುಖ ಅಧಿಕಾರಿಗಳು (ಡಿಸಿ, ಎಸ್‌ಪಿ ಮತ್ತು ಜಿಲ್ಲ ಪಂಚಾಯ್ತಿ ಸಿಇಓ) ಸರಿಯಾದ ರೀತಿಯಲ್ಲಿ ಕೆಲಸ ಮಾಡಿದರೆ ಸಾರ್ವಜನಿಕರ ದೈನಂದಿನ ಸಮಸ್ಯೆಗಳಿಗೆ ಖಂಡಿತವಾಗಿಯೂ ಪರಿಹಾರ ದೊರೆಯುತ್ತದೆ. ಇವರೆಲ್ಲರೂ ಪಬ್ಲಿಕ್ ಮುಂದೆ ಅಥವಾ ತಮ್ಮ ಆಫೀಸುಗಳಲ್ಲಿ ಕಾಣಿಸಿಕೊಳ್ಳುವುದು ಮುಖ್ಯಮಂತ್ರಿಯೋ, ಉಪಮುಖ್ಯಮಂತ್ರಿಯೋ ಅಥವಾ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸ್ಥ ಳಕ್ಕೆ ಭೇಟಿ ಕೊಟ್ಟಾಗ ಮಾತ್ರ. ಉಳಿದ ವೇಳೆ ಇಲ್ಲಿನ ಅಧಿಕಾರಿಗಳು ಯಾರೂ ಜನತೆಯ ಕೈಗೆ ಸಿಗೋದಿಲ್ಲ. ದುರದೃಷ್ಟ ಎಂದರೆ ಜನತೆ ಮಾತ್ರ ಅರ್ಜಿಯನ್ನು ಕೈಯಲ್ಲಿ ಹಿಡಿದುಕೊಂಡು ತಾಲೂಕು ಕಚೇರಿ ಮತ್ತು ಡಿಸಿ ಕಚೇರಿಗಳ ಮುಂದೆ ದಿನಗಟ್ಟಳೆ ಚಾತಕಪಕ್ಷಿಗಳಂತೆ ಕಾಯುತ್ತಿರುವುದು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಜನತೆಯ ಕಲ್ಯಾಣಕ್ಕಾಗಿ ಘೋಷಣೆಯಾಗಿರುವ ಯೋಜನೆಗಳೆಷ್ಟು ? ಗ್ಯಾರಂಟಿಗಳೆಷ್ಟು ? ಈ ಯೋಜನೆಗಳೆಲ್ಲವೂ ಫಲಾನುಭವಿಗಳಿಗೆ ಸರಿಯಾಗಿ ತಲುಪಿವೆಯೇ ಅಥವಾ ಗಾಳಿಯಲ್ಲಿ ತೇಲಾಡುತ್ತಿವೆಯೇ? ಯೋಜನೆಗಳ ಹೆಸರಿನಲ್ಲಿ ಬಿಡುಗಡೆಯಾದ ಹಣ, ಧಾನ್ಯ ಯಾರ ಜೇಬು ಸೇರುತ್ತಿದೆ? ಮಧ್ಯವರ್ತಿಗಳ ಕೈಚಳಕವೇನು? ಈ ಸಂಗತಿಗಳು ಯಾವುದೂ ಇಂದು ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ಆಗುತ್ತಿಲ್ಲ. ಸರ್ಕಾರಗಳಿಗೆ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ಗುರುತರ ಹೊಣೆಗಾರಿಕೆ ಇದೆ. ಆದರೆ ಇಂದು ಜನಪ್ರತಿನಿಧಿಗಳಿಗೆ ಇದರ ಕಡೆ ಗಮನವೇ ಇಲ್ಲದಂತಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಓರ್ವ ಸಾಮಾನ್ಯನಿಗೆ ಸರ್ಕಾರದ ವೆಚ್ಚದಲ್ಲಿ ಉಚಿತವಾಗಿ ಚಿಕಿತ್ಸೆ ದೊರಕುತ್ತಿಲ್ಲ.
ಓರ್ವ ಕೂಲಿ, ಕಾರ್ಮಿಕನ ರೋಗಪೀಡಿತ ಮಗ ಅಥವಾ ಮಗಳು ಸೂಕ್ತ ಚಿಕಿತ್ಸೆ ಇಲ್ಲದೆ ಪ್ರಾಣ ಬಿಡುವಂತಾಗಿರುವುದು ಅತಿಶಯವಲ್ಲ. ಇವರಿಗೆ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಲಕ್ಷೆಪಲಕ್ಷ ರೂಪಾಯಿಗಳನ್ನು ಸುರಿದು ಹೈಟೆಕ್ ಚಿಕಿತ್ಸೆ ಪಡೆದುಕೊಳ್ಳುವ ಶಕ್ತಿಯಿಲ್ಲ. ತಾಲೂಕು ಅಫೀಸಿನಲ್ಲಿ ಓರ್ವ ಬಡ ರೈತನು ತಮ್ಮ ಜಮೀನಿನ ಇಸಿ ಪಡೆಯಲು ಸಾವಿರಾರು ರೂಪಾಯಿ ಲಂಚ ತೆತ್ತಬೇಕಿದೆ! ಇನ್ನು ಮುನಿಸಿಪಲ್ ಆಫೀಸು ಮತ್ತು ಪಂಚಾಯ್ತಿ ಅಫೀಸಿನಲ್ಲಿ ಜನನ, ಮರಣ ಪತ್ರಗಳನ್ನು ಪಡೆಯಲು ಜನತೆ ಯಾತನೆಯನ್ನೇ ಅನುಭವಿಸಬೇಕಿದೆ. ದೇವರು ವರ ನೀಡಿದರೂ ಪೂಜಾರಿ ವರ ಕೊಡಲಿಲ್ಲ ಎಂಬಂತೆ ಸರ್ಕಾರದಿಂದ ಮಂಜೂರಾದ ಪಿಂಚಣಿ ಮತ್ತು ಸಹಾಯಧನವನ್ನು ಫಲಾನುಭವಿಗಳಿಗೆ ನೀಡಲು ಅಧಿಕಾರಿಗಳು ಕಮಿಷನ್ ಕೇಳುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ.
ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಕ್ರಿಯಾಶೀಲರಾದಲ್ಲಿ ಅದರಿಂದ ಜನತೆಗೆ ಆಗುವ ಉಪಯೋಗ ಮತ್ತು ಲಾಭಗಳನ್ನು ಇಲ್ಲಿ ಉಲ್ಲೇಖಿಸಬೇಕಿದೆ. ಉಪಲೋಕಾಯುಕ್ತರಿಗೆ ಕೇವಲ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಕರ್ತವ್ಯಭ್ರಷ್ಟರನ್ನು ಖುದ್ದು ವಿಚಾರಣೆ ನಡೆಸುವ ಅಧಿಕಾರವೊಂದೇ ಅಲ್ಲ. ಅಂಥವರನ್ನು ಸ್ಥಳದಲ್ಲಿಯೇ ಸಸ್ಪೆಂಡ್ ಮಾಡಿ ತನಿಖೆಗೆ ಆದೇಶಿಸುವಂತಹ ಕ್ವಾಸಿ ಜುಡಿಷಿಯಲ್ ಪವರ್ ಕೂಡಾ ಇದೆ. ೨೫ ವರ್ಷಗಳ ಹಿಂದೆ ಅಂದಿನ ಲೋಕಾಯುಕ್ತರಾಗಿದ್ದ ಎನ್. ವೆಂಕಟಾಚಲ ಅವರು ಮೈಗಳ್ಳರು ಮತ್ತ ಕರ್ತವ್ಯಹೀನ ಅಧಿಕಾರಿಗಳನ್ನು ಈ ರೀತಿಯಾಗಿ ದಂಡಿಸಲು ಯಾವ ಮುಲಾಜೂ ನೋಡಲಿಲ್ಲ . ಅವರು ತಿಂಗಳಿಗೊಮ್ಮೆ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಜನತೆಯ ಕಷ್ಟ ಕಾರ್ಪಣ್ಯ ವಿಚಾರಿಸಿದ್ದು ನಿಜ . ಹೀಗಾಗಿ ಸರ್ಕಾರಿ ಅಧಿಕಾರಿಗಳಿಗೆ ತಾವು ನೆಟ್ಟಗೆ ಡ್ಯೂಟಿ ಮಾಡದೇ ಇದ್ದಲ್ಲಿ ಕೆಲಸದಿಂದ ಸಸ್ಪೆಂಡ್ ಆಗುವುದಲ್ಲದೆ ಪಬ್ಲಿಕ್‌ನಲ್ಲಿ ತಮ್ಮ ಮಾನ, ಮರ್ಯಾದೆ ಹರಾಜಾಗುವುದೆಂಬ ಭಯ ಕಾಡುತ್ತಿತ್ತು.
ಒಟ್ಟಿನಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗದಿಂದ ಜನತೆಯ ಆಶೋತ್ತರಗಳು ಸಮರ್ಪಕ ಪ್ರಮಾಣದಲ್ಲಿ ನೆರವೇರುತ್ತಿಲ್ಲ ಎಂದಾದರೆ ಅದು ಲೋಕಾಯುಕ್ತ ಸಂಸ್ಥೆಯ ಮೂಲಕವಾದರೂ ಈಡೇರಿದರೆ ತಪ್ಪಲ್ಲ. ಲೋಕಾಯುಕ್ತ ಎಂದರೆ ಬರೀ ಲಂಚಕೋರರನ್ನು ಸದೆಬಡಿಯಲು ಇರುವಂತಹ ಸಂಸ್ಥೆ ಎಂದು ಭಾವಿಸಿದರೆ ತಪ್ಪಾದೀತು. ಒಂಬುಡ್ಸ್‌ಮನ್ ಪರಿಕಲ್ಪನೆ ಒಟ್ಟಾರೆ ಆಡಳಿತದ ಸುಧಾರಣೆಗೆ ಇದು ಪೂರಕ ಎಂಬುದು. ಈ ನಿಟ್ಟಿನಲ್ಲಿ ಸರ್ಕಾರದ ಮತ್ತು ಶಾಸನಸಭೆಯ ಅಲೋಚನೆ ಕೂಡಾ ಅತಿ ಮುಖ್ಯ. ವೆಂಕಟಾಚಲ ಮತ್ತು ಹೆಗ್ಡೆ ಅವರ ಕ್ರಿಯಾಶೀಲತೆಯನ್ನು ಶಾಸಕಾಂಗ ಓವರ್ ಆಕ್ಟಿವಿಸಂ ಎಂದು ಟೀಕಿಸಿದ್ದುಂಟು. ಇದನ್ನು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನವೂ ಈ ಹಿಂದೆ ತೆರೆಮರೆಯ ಹಿಂದೆ ನಡೆದಿತ್ತು. ಭ್ರಷ್ಟಾಚಾರದ ವೀರ ಸಂಹಾರ ಎಂದು ಬ್ಯಾನರ್ ಹಾಕಿಕೊಂಡು ಜನತೆಯ ಕಣ್ಣಿಗೆ ಮಣ್ಣೆರಚುವಂತಹ ರಾಜಕೀಯ ಪಕ್ಷಗಳ ಮುಖವಾಡವನ್ನು ಜನತೆಯೇ ಕೊನೆಗೆ ಕಳಚುವಂತಹ ಪರಿಸ್ಥಿತಿ ಈಗಿದೆ. ಇದಕ್ಕೆ ಲೋಕಾಯುಕ್ತ ಸಂಸ್ಥೆಗಳ ನಿರ್ಭೀತ ಕಾರ್ಯಾಚರಣೆ ಅತಿ ಮುಖ್ಯ.
ನಾವಿಂದು ನಮ್ಮ ಸುತ್ತಲಿನ ಗಿಡಮರ ,ಬೆಟ್ಟ, ಗುಡ್ಡ, ಕೆರೆ, ಕುಂಟೆ , ಆಟದ ಮೈದಾನಗಳನ್ನು ಕಳೆದುಕೊಂಡಿzವೆ. ಇದನ್ನು ಸದಾ ಕಾಪಾಡಲೆಂದೇ ನಿಯೋಜಿತಗೊಂಡಿರುವ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತ ನಿಷ್ಕ್ರಿಯಗೊಂಡಿವೆ. ಪಟ್ಟಣ ಮತ್ತು ಸಿಟಿ ರಸ್ತೆಗಳು ಇಂಜಿನಿಯರುಗಳು ಮತ್ತು ಗುತ್ತಿಗೆದಾರರ ಅವ್ಯಾಹತ ಲಂಚಗುಳಿತನದಿಂದ ಮಾರಣಾಂತಿಕ ಅಪಘಾತಗಳು ಹೆಚ್ಚಾಗಿವೆ. ಇವೆಲ್ಲವೂ ಉಪಲೋಕಾಯುಕ್ತರ ಅಧಿಕಾರ ವ್ಯಾಪ್ತಿಗೆ ಬರುವಂತಹದು. ಒಂದು ರೀತಿಯಲ್ಲಿ ವೀರಪ್ಪ ಅವರು ಹಿಂದಿನ ಲೋಕಾಯುಕ್ತರಂತೆ ಕ್ರಿಯಾಶೀಲರಾದಲ್ಲಿ ಇದರಿಂದ ರಾಜ್ಯದ ನೊಂದ ಬೆಂದ ಜನತೆಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಳ್ಳಲು ಸಹಾಯಕವಾದೀತು.
-ಪಿ.ರಾಜೇಂದ್ರ