Menu

ರಾಜ್ಯಗಳ ಸಂಕಷ್ಟಕ್ಕೆ ಸ್ಪಂದಿಸುವುದೇ ಕೇಂದ್ರ ಬಜೆಟ್?

ಎನ್‌ಡಿಎ ಆಡಳಿತದಲ್ಲಿ ದೇಶದ ಒಟ್ಟು ಆರ್ಥಿಕತೆ ಸುಸ್ಥಿತಿಯಲ್ಲಿದೆ ಎಂಬುದಲ್ಲ. ರಾಜ್ಯಗಳ ಸಂಪೂರ್ಣ ಸಹಕಾರ ಮತ್ತು ಜಿಎಸ್‌ಟಿ ತೆರಿಗೆ ಸಂಗ್ರಹ ಮತ್ತು ಅನುದಾನದ ವಿಚಾರದಲ್ಲಿಂದು ಕೆಲವು ರಾಜ್ಯಗಳಲ್ಲಿ ತಲೆದೋರಿರುವ ಗಂಭೀರ ಪ್ರಶ್ನೆಗಳಿಗೆ ಈ ಬಜೆಟ್ ಉತ್ತರವಾಗಲಿದೆಯೆ ಎಂಬುದೀಗ ಪ್ರಶ್ನೆ.

ದೇಶದ ಮುಂದಿನ ಆರ್ಥಿಕ ಸಾಲಿನ ಆಯ-ವ್ಯಯವನ್ನು ಸಂಸತ್ತಿನಲ್ಲಿಂದು ಮಂಡನೆಯಾಗಲಿದೆ. ಕೇಂದ್ರ ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಮುಂಗಡಪತ್ರವನ್ನು ಮಂಡಿಸುತ್ತಿರುವುದು ಗಮನಾರ್ಹ.ಕಳೆದ ಸಾಲಿನಲ್ಲಿ ಮುಂಗಡಪತ್ರ ಮಂಡನೆ ಯಾದ ಸನ್ನಿವೇಶಕ್ಕೂ, ಪ್ರಸಕ್ತ ಪರಿಸ್ಥಿತಿಗೂ ವ್ಯತ್ಯಾಸವಿದೆ. ಇದೇ ವೇಳೆ ಎರಡು ದಿನಗಳ ಹಿಂದೆ ಮಂಡನೆಯಾದ ಆರ್ಥಿಕ ಸಮೀಕ್ಷೆಯಲ್ಲಿ ಹಲವು ಹತ್ತು ಗಂಭೀರ ಸಂಗತಿಗಳಿವೆ. ಅಮೆರಿಕ ಮತ್ತು ಚೀನಾ ದೇಶಗಳು ಭಾರತೀಯ ಆರ್ಥಿಕತೆಗೆ ಸಂಕಷ್ಟ ಗಳನು ಸೃಷ್ಟಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬ ಕಳವಳಕಾರಿ ಸಂಗತಿ ಅರ್ಥಿಕ ಸಮೀಕ್ಷೆಯಿಂದ ಬಯಲಾಗಿದೆ.

ಜಾಗತಿಕವಾಗಿ ಪ್ರಸಕ್ತ ಆರ್ಥಿಕ ಸ್ಥಿತಿಗತಿಯನ್ನು ದೇಶವು ಗಂಭೀರವಾಗಿ ನೋಡಿದಾಗ, ಭಾರತದ ಮುಂದಿರುವ ಆರ್ಥಿಕ ಸವಾಲುಗಳನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಸ್ಪಷ್ಟ. ಒಂದು ಕಡೆ ರಾಜಕೀಯವಾಗಿ ದೇಶದ ಜನತೆ ಯನ್ನು ತನ್ನತ್ತ ಎಳೆದುಕೊಳ್ಳಲು ಎನ್‌ಡಿಎ ಸರ್ಕಾರದ ಮುಂದಿರುವ ಅವಕಾಶ ಮತ್ತು ಎರಡನೆಯದಾಗಿ ಚುನಾವಣೆಗಳು ಸಂಭವಿಸುವ ಪಶ್ಚಿಮ ಬಂಗಾಳ , ಕೇರಳ ಮತ್ತು ತಮಿಳುನಾಡಿನ ರಾಜ್ಯಗಳಿಗೆ ಈ ಮುಂಗಡಪತ್ರದಲ್ಲಿ ಅಧಿಕ ಮನ್ನಣೆ ದೊರಕುವುದು ಅಚ್ಚರಿಯೇನಲ್ಲ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮ,ಯ್ಯ ಅವರು ಕರ್ನಾಟಕಕ್ಕೆ ಬಜೆಟ್‌ನ ಒಟ್ಟು ಮೊತ್ತದಲ್ಲಿ ಶೆ. ೪.೭೧ಕ್ಕೂ ಅಧಿಕ ಅನುದಾನವನ್ನು ತಮಗೆ ನೀಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ರಾಜ್ಯಗಳು ದೇಶದ ಒಟ್ಟಾರೆ ಆರ್ಥಿಕ ಪ್ರಗತಿಯಲ್ಲಿ ಪ್ರಗತಿ ವಹಿಸುತ್ತದೆ ಎಂಬುದು ನಿರ್ವಿವಾದ ಸಂಗತಿ. ಈ ವಿಚಾರದಲ್ಲಿ ತಾರತಮ್ಯ ಸಲ್ಲದು. ಫೆಡರಲ್ ಆಡಳಿತದ ವ್ಯವಸ್ಯೆ ಕೇಂದ್ರವು ಬಜೆಟ್ ಮಂಡಿಸುವ ಮುನ್ನ ಎಲ್ಲ ರಾಜ್ಯಗಳ ಬೇಕು-ಬೇಡಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಸೂಕ್ತ. ಪರೋಕ್ಷ ತೆರಿಗೆ ಸಂಗ್ರಹಣೆಯಲ್ಲಿ ಹೊಸದಾಗಿ ಜಾರಿಗೆ ಬಂದ ಜಿಎಸ್‌ಟಿಯಿಂದ ದೇಶದ ಬೊಕ್ಕಸಕ್ಕೆ ಉತ್ತಮ ಆದಾಯ ಒದಗುತ್ತಿರುವುದು ಸರಿಯಷ್ಟೆ. ಆದರೆ ಸಂಗ್ರಹವಾದ ಈ ತೆರಿಗೆಯನ್ನು ಯಾವ ರಾಜಕೀಯ ತಾರತಮ್ಯವೂ ಇಲ್ಲದೆ ಎಲ್ಲ ರಾಜ್ಯಗಳಿಗೆ ಸಮಾನ  ಅನುಪಾತದಲ್ಲಿ ಅನುದಾನವನ್ನು ಹಂಚುವುದು ಕೇಂದ್ರದ ಹೊಣೆ.

ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ ಬಳಿಕ ಕರ್ನಾಟಕದ್ದೇ ಸಿಂಹಪಾಲು. ಆದರೆ ಈ ತೆರಿಗೆಗಳ ಹಂಚಿಕೆಯಲ್ಲಿಂದು ರಾಜ್ಯ ಸರ್ಕಾರ ಕೇಂದ್ರದ ಮುಂದೆ ನ್ಯಾಯ ಸಮ್ಮತ ಅನುದಾನಕ್ಕಾಗಿ ಗುದ್ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತು ಇನ್ನೊಂದು ಕಣ್ಣಿಗೆ ಸುಣ್ಣವನ್ನು ಹಚ್ಚುವ ರೀತಿಯಲ್ಲಿ ಮುಂಗಡಪತ್ರವಿರಬಾರದು .ವಸತಿ, ಉದ್ಯೋಗ ಮತ್ತು ಶಿಕ್ಷಣ ವಲಯದಲ್ಲಿ ಈ ದೇಶದ ಸಾಮಾನ್ಯನಿಗೆದೊರೆಯುವ ಭರವಸೆ ಏನೆಂಬುದೂ ಇಲ್ಲಿ ಮುಖ್ಯ ಜಾಗತಿಕ ಆರ್ಥಿಕ ತಲ್ಲಣ ಗಳು ಮುಂಗಡಪತ್ರದ ಮೇಲೆ ನೇರ ಪರಿಣಾಮ ಬೀರುವುದು ಖಂಡಿತ. ಅಮೆರಿಕ ವಿಧಿಸುತ್ತಿರುವ ಹೊಸ ಬಗೆಯ ತೆರಿಗೆಭಾರವು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜನತೆಗೆ ಸಂಕಷ್ಟ ತರುವುದೆಂಬ ಮಾತಿನಲ್ಲಿ ಯಾವುದೇ ಅತಿಶಯವಿಲ್ಲ. ಎನ್‌ಡಿಎ ಆಡಳಿತದಲ್ಲಿ ದೇಶದ ಒಟ್ಟು ಆರ್ಥಿಕತೆ ಸುಸ್ಥಿತಿಯಲ್ಲಿದೆ ಎಂಬುದಲ್ಲ. ರಾಜ್ಯಗಳ ಸಂಪೂರ್ಣ ಸಹಕಾರ ಮತ್ತು ಜಿಎಸ್‌ಟಿ ತೆರಿಗೆ ಸಂಗ್ರಹ ಮತ್ತು ಅನುದಾನದ ವಿಚಾರದಲ್ಲಿಂದು ಕೆಲವು ರಾಜ್ಯಗಳಲ್ಲಿ ತಲೆದೋರಿರುವ ಗಂಭೀರ ಪ್ರಶ್ನೆಗಳಿಗೆ ಈ ಬಜೆಟ್ ಉತ್ತರವಾಗಲಿದೆಯೆ ಎಂಬುದೀಗ ಪ್ರಶ್ನೆ.

Related Posts

Leave a Reply

Your email address will not be published. Required fields are marked *