ಬೆಂಗಳೂರು: ತವರಿನ ಹುಡುಗ ಕೆಎಲ್ ರಾಹುಲ್ ಮಿಂಚಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲಿ ಎಂದು ಅಭಿಮಾನಿಗಳು ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಕ್ಕೆ ಹಾರೈಸುವಂತಾಗಿದೆ.
ಅಜೇಯರಾಗಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅದರದ್ದೇ ನೆಲದಲ್ಲಿ ಎದುರಿಸುತ್ತಿದೆ.ತವರಿನ ಹೊರಗೆ ನಡೆದ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಆರ್ ಸಿಬಿ ತವರಿನಲ್ಲಿ ಆಡಿದ 1 ಪಂದ್ಯದಲ್ಲಿ ಸೋಲುಂಡಿದೆ.
ಆಡಿದ ಎಲ್ಲಾ 4 ಪಂದ್ಯಗಳನ್ನು ಗೆದ್ದಿರುವ ಅಕ್ಸರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ 5ನೇ ಗೆಲುವಿನ ನಿರೀಕ್ಷೆಯಲ್ಲಿದೆ. ಅಲ್ಲದೇ ಬೆಂಗಳೂರಿನಲ್ಲಿ 2024ರಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಉಮೇದಿನಲ್ಲಿದೆ. ಆದರೆ ಬೆಂಗಳೂರಿನ ಅಭಿಮಾನಿಗಳು ಯಾರನ್ನು ಬೆಂಬಲಿಸುವುದು ಎಂಬ ಗೊಂದಲದಲ್ಲಿದ್ದಾರೆ. ಏಕೆಂದರೆ ಆರ್ ಸಿಬಿಗೆ ಈ ಬಾರಿ ಬಂದೇ ಬರುತ್ತಾರೆ ಎಂದು ನಿರೀಕ್ಷಿಸಲಾಗಿದ್ದ ಕೆಎಲ್ ರಾಹುಲ್ ಕೊನೆಯ ಗಳಿಗೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದರು.
ಡೆಲ್ಲಿ ಪಾಲಾದರೂ ಮೊದಲ ನಾಲ್ಕು ಪಂದ್ಯಗಳಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಆಡಿದ ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಭರ್ಜರಿ ಪ್ರದರ್ಶನ ನೀಡಿದ್ದೂ ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅಲ್ಲದೇ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದಾರೆ.
ಇದೇ ರೀತಿ ಕನ್ನಡಿಗರು ಕೆಎಲ್ ರಾಹುಲ್ ಬೆಂಗಳೂರಿನ ಪಿಚ್ ನಲ್ಲಿ ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸುತ್ತಿದ್ದಾರೆ. ಆದರೆ ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿರುವ ಆರ್ ಸಿಬಿ ಉತ್ತಮ ಪ್ರದರ್ಶನ ನೀಡಿ ಗೆದ್ದು ಬರಲಿ ಎಂದು ಹಾರೈಸುತ್ತಿದ್ದಾರೆ.
ಆರ್ ಸಿಬಿ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ತವರಿನಲ್ಲಿ ಗೆಲ್ಲದೇ ಇರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಅದರಲ್ಲೂ ಭರ್ಜರಿ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಕೂಡ ವಿಫಲರಾಗಿದ್ದು ಹೆಚ್ಚು ಆಘಾತ ನೀಡಿದೆ. ಇದರಿಂದ ಕೊಹ್ಲಿ ಕೂಡ ರನ್ ಹೊಳೆ ಹರಿಸಿ ಆರ್ ಸಿಬಿ ಗೆಲ್ಲಲಿ ಎಂದು ಬಯಸುವಂತಾಗಿದೆ.
ಆರ್ ಸಿಬಿ ತಂಡದಲ್ಲಿ ಫಿಲ್ ಸಾಲ್ಟ್, ದೇವದತ್ ಪಡಿಕಲ್, ರಜತ್ ಪಟಿದಾರ್, ಲಿಯಾಮ್ ಲಿವಿಂಗ್ ಸ್ಟನ್ ಮತ್ತು ಟಿಮ್ ಡೇವಿಡ್ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಬೌಲಿಂಗ್ ನಲ್ಲಿ ಹಾಜೆಲ್ ವುಡ್, ಕೃನಾಲ್ ಪಾಂಡ್ಯ ಮುಂತಾದವರು ಪರಿಣಾಮಕಾರಿ ದಾಳಿ ನಡೆಸುತ್ತಿದ್ದಾರೆ ಇದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.