ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು ಉತ್ಸವದ ಜ್ಯೋತಿಗೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿಗಳು ತಮ್ಮ ಸಂಪುಟ ಸದಸ್ಯರಿಗಾಗಿ ಇಂದು ಆಯೋಜಿಸಿರುವ ಭೋಜನಕೂಟದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಬಹಳ ದಿನ ಆಗಿತ್ತು ಊಟಕ್ಕೆ ಸೇರಿ, ಹಾಗಾಗಿ ಒಂದು ಊಟ ಆಯೋಜನೆ ಮಾಡಿದ್ದೇವೆ. ಅದು ಬಿಟ್ಟು ಬೇರಾವುದೇ ವಿಚಾರ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದರೂ ಸಿಎಂ ದಿಢೀರ್ ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿರುವುದರ ಬಗ್ಗೆ ಹಲವು ಊಹಾಪೋಹಗಳು ಸದ್ದು ಮಾಡುತ್ತಿವೆ.
ನವೆಂಬರ್ ಕ್ರಾಂತಿಯ ಸದ್ದು ಮಧ್ಯೆ ಕಾಂಗ್ರೆಸ್ ನಲ್ಲಿ ಡಿನ್ನರ್ ಸಭೆ, ಪ್ರತ್ಯೇಕ ಸಭೆಗಳು ನಡೆಯುತತಿವೆ. ಬಿಹಾರ ಚುನಾವಣೆ ಬಳಿಕ ಬದಲಾವಣೆ, ಸಂಪುಟ ಪುನಾರಚನೆಯ ಕೂಗು ಕೇಳಿ ಬರುತ್ತಿದೆ. ಎರಡೂವರೆ ವರ್ಷ ಮುಗಿಸಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಬದಲಾವಣೆ ಆಗಲಿದೆ ಎಂಬ ಚರ್ಚೆಯೂ ಬಿರುಸಾಗಿದೆ.
ಬಿಹಾರ ಚುನಾವಣೆ ಹತ್ತಿರ ಬರುತ್ತಿದ್ದು, ಕಾಂಗ್ರೆಸ್’ಗೆ ಕರ್ನಾಟಕ ಎಟಿಎಂ ಆಗಿ ಮಾರ್ಪಟ್ಟಿದೆ. ಬಿಹಾರ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ನ ಖರ್ಚಿನ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯದ ಕಾಂಗ್ರೆಸ್ ನಾಯಕರು ವಹಿಸಿಕೊಂಡಿದ್ದಾರೆ. ಹೀಗಾಗಿಯೇ ಈ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ಅವರು ಔತಣಕೂಟ ಕರದಿದ್ದಾರೆಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ವೀರೇಂದ್ರ ಪಪ್ಪಿ ಬಳಿ ಇದ್ದ ಸುಮಾರು 300 ಕೋಟಿ ರೂ.ಗೂ ಮೇಲ್ಪಟ್ಟ ಚಿನ್ನ ಇಡಿ ಕೈಗೆ ಸಿಕ್ಕಿ ಹಾಕಿಕೊಂಡಿದೆ. ಹೀಗಾಗಿ ಬಿಹಾರ ಚುನಾವಣೆಗೆ ಫಂಡ್ ಸಂಗ್ರಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರ ಔತಣಕೂಟ ಕರೆದಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.