ಮುಂಬೈ: ಅಮಿರ್ ಖಾನ್ ನಟಿಸಿ ನಿರ್ಮಿಸಿರುವ ಸಿತಾರೆ ಜಮೀನ್ ಪರ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಇದು ಹಾಲಿವುಡ್ ನ ಚಾಂಪಿಯನ್ಸ್ ಚಿತ್ರದ ಫ್ರೇಮ್ ಟು ಫ್ರೇಮ್ ನಕಲು ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.
ಆರ್.ಎಸ್. ಪ್ರಸನ್ನ ನಿರ್ದೇಶಿಸಿರುವ ಸಿತಾರೆ ಜಮೀನ್ ಪರ್ ಚಿತ್ರದಲ್ಲಿ 10 ಯುವ ನಟರು ಮೊದಲ ಬಾರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ದೀರ್ಘ ಸಮಯದ ನಂತರ ಜಿನೆಲಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಲಾಲ್ ಸಿಂಗ್ ಚಡ್ಡಾ ನಂತರ ಅಮೀರ್ ಖಾನ್ ನಟಿಸುತ್ತಿರುವ ಚಿತ್ರ ಇದಾಗಿದೆ. ಲಾಲ್ ಸಿಂಗ್ ಚಡ್ಡಾ ವಿಫಲವಾದ ನಂತರ ಬರುತ್ತಿರುವ ಭಾರೀ ನಿರೀಕ್ಷೆ ಹುಟ್ಟಿಸಿರುವ ಚಿತ್ರ ಇದಾಗಿದೆ. ಲಾಲ್ ಸಿಂಗ್ ಚಡ್ಡಾ ಕೂಡ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಆಗಿದ್ದರಿಂದ ಫ್ಲಾಪ್ ಆಗಿತ್ತು. ಇದರಿಂದ ಬುದ್ದಿ ಕಲಿಯದ ಅಮಿರ್ ಮತ್ತೆ ರಿಮೇಕ್ ಗೆ ಮೊರೆ ಹೋಗಿರುವುದು ದುರಾದೃಷ್ಟಕರ ಎಂದು ಟೀಕಿಸಲಾಗಿದೆ.
ತಾರೆ ಜಮೀನ್ ಪರ ಚಿತ್ರ ಭಾರೀ ಹೆಸರು ತಂದುಕೊಟ್ಟ ನಂತರ ಅದರ ಎರಡನೇ ಭಾಗ ಎಂಬಂತೆ ಸಿತಾರೆ ಜಮೀನ್ ಪರ್ ಚಿತ್ರ ಎಂದು ಹೇಳಲಾಗಿದೆ.
ಬುಧವಾರ ಸಿತಾರೆ ಜಮೀನ್ ಪರ ಟ್ರೇಲರ್ ಬಿಡುಗಡೆ ಆಗಿದ್ದು, ಕುಡಿದ ಮತ್ತಿನಲ್ಲಿ ಬಾಸ್ಕೆಟ್ ಬಾಲ್ ಕೋಚ್ ಅಪಘಾತ ಮಾಡುತ್ತಾರೆ. ಇದಕ್ಕೆ ಶಿಕ್ಷೆಯಾಗಿ ಆತನಿಗೆ ರಾಷ್ಟ್ರಮಟ್ಟದ ವಿಕಲಚೇತನ ಮಕ್ಕಳಿಗೆ ಬಾಸ್ಕೆಟ್ ಬಾಲ್ ತರಬೇತಿ ನೀಡುವಂತೆ ಸೂಚಿಸಲಾಗುತ್ತದೆ. ವಿಕಲಚೇತನ ಮಕ್ಕಳು ಹೇಗೆ ಪ್ರಶಸ್ತಿ ಗೆಲ್ಲುತ್ತಾರೆ ಎಂಬುದು ಚಿತ್ರದ ಸಾರಾಂಶವಾಗಿ ಕಂಡು ಬರುತ್ತದೆ.
ಆದರೆ ಟ್ರೇಲರ್ ನೋಡಿದ ಅಭಿಮಾನಿಗಳು ಅಮಿರ್ ಖಾನ್ ಹಾಲಿವುಡ್ ನ ಚಾಂಪಿಯನ್ಸ್ ಚಿತ್ರದ ಫ್ರೇಮ್ ಟು ಫ್ರೇಮ್ ಕಾಪಿ ಮಾಡಿದ್ದಾರೆ. ಇದಕ್ಕಾಗಿಯೇ ಅವರನ್ನು ಮಿಸ್ಟರ್ ಪರ್ಫೆಕ್ಟ್ ಎಂದು ಕರೆಯಲಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.