2024-25ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಪರೀಕ್ಷೆಗಳು ಇನ್ನೇನು ಒಂದು ತಿಂಗಳಲ್ಲಿ ಪ್ರಾರಂಭವಾಗಲಿವೆ. ಪರೀಕ್ಷಾ ತಯಾರಿಗಳು ಜೋರಾಗಿ ಸಾಗುತ್ತಿವೆ. ಮಕ್ಕಳು, ಪಾಲಕರು ಹಾಗೂ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಮೇಲೆ ವಿಶೇಷವಾದ ಒತ್ತಡ, ನಿರೀಕ್ಷೆಗಳಿವೆ. ನಮ್ಮಲ್ಲಿ ರಾಜ್ಯದ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು, ಕೇಂದ್ರ ಪಠ್ಯಕ್ರಮದ ಸಿಬಿಎಸ್ಸಿ ಶಾಲೆಗಳು ಹಾಗೂ ಅಂತಾರಾಷ್ಟ್ರೀಯ ಪಠ್ಯಕ್ರಮದ ಐಸಿಎಸ್ಇ ಶಾಲೆಗಳಿದ್ದು, ಅವೆಲ್ಲವೂ ತಮ್ಮದೇ ಆದ ಪರೀಕ್ಷಾ ಮಂಡಳಿಯನ್ವಯ ಹತ್ತನೇ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸುತ್ತವೆ.
ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೀಡಿರುವ ಅಂಕಿ ಅಂಶದ ಪ್ರಕಾರ ಈ ಬಾರಿ ಸುಮಾರು 9ಲಕ್ಷ ರಾಜ್ಯ ಪಠ್ಯಕ್ರಮದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಕಳೆದ ಐದು ವರ್ಷಗಳ ಸಂಖ್ಯೆಗಳಿಗೆ ಹೋಲಿಸಿದರೆ ಈ ಬಾರಿ ಅತಿ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂಬುದು ತಿಳಿಸುತ್ತದೆ. ಕಳೆದ ಸಾಲಿನ ರಾಜ್ಯ ಪಠ್ಯಕ್ರಮದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಶಿಕ್ಷಣ ಇಲಾಖೆಯ ಇತಿಹಾಸದ ಅತ್ಯಂತ ಕಳಪೆ ಫಲಿತಾಂಶ ಎಂಬ ಕುಖ್ಯಾತಿ ಪಡೆಯುವ ಮೂಲಕ ಸಾಕಷ್ಟು ಚರ್ಚೆಗೆ ಕಾರಣವಾದ ಘಟನೆಯನ್ನು ಯಾರೂ ಮರೆತಿಲ್ಲ. ಏಕೆಂದರೆ ಕಳೆದ ಬಾರಿ ನಿಗದಿತ ಶೇಕಡಾ 10ರಷ್ಟು ಗ್ರೇಸ್ ಅಂಕದೊಂದಿಗೆ ವಿಶೇಷವಾಗಿ ಶೇಕಡಾ 20ರಷ್ಟು ಹೆಚ್ಚುವರಿ ಗ್ರೇಸ್ ಅಂಕ ನೀಡಿದರೂ, ಶೇಕಡಾವಾರು ಫಲಿತಾಂಶದಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿತು. ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಎರಡೆರಡು ಬಾರಿ ಮರುಪರೀಕ್ಷೆ ಮಾಡಿದರೂ, ಮತ್ತದೇ ಫಲಿತಾಂಶ ಕಂಡು ಬಂತು. 62 ಖಾಸಗಿ, 13 ಅನುದಾನಿತ ಹಾಗೂ ಮೂರು ಸರ್ಕಾರಿ ಶಾಲೆಗಳು ಸೇರಿದಂತೆ 78 ಶಾಲೆಗಳು ಕಳೆದ ಬಾರಿ ಶೂನ್ಯ ಫಲಿತಾಂಶ ದಾಖಲಿಸಿದವು. ಹೆಚ್ಚಿನ ಶಾಲೆಗಳು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಸೇರಿದ್ದು, 34ನೇ ಸ್ಥಾನ ಪಡೆದಿರುವ ಕಲಬುರಗಿ ಜಿಯ 18 ಶಾಲೆಗಳು ಶೂನ್ಯ ಫಲಿತಾಂಶ ಪಡೆದವು. ಯಾದಗಿರಿ ಒಂಬತ್ತು, ಬೆಳಗಾವಿ ಆರು ಹಾಗೂ ಚಿಕ್ಕೋಡಿ ಜಿಯಲ್ಲಿನ ಐದು ಶಾಲೆಗಳು ಶೂನ್ಯ ಫಲಿತಾಂಶ ನೀಡಿದ ಶಾಲೆಗಳ ಪಟ್ಟಿಗೆ ಸೇರಿಕೊಂಡವು.
ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವ ಬದಲಿಗೆ ಬೇಕಾಬಿಟ್ಟಿಯಾಗಿ ಯಾವುದೇ ಪೂರ್ವನಿಗದಿತ ಸೂಚನೆಗಳಿಲ್ಲದೇ ಗ್ರೇಸ್ ಅಂಕ ನೀಡಿದ್ದರ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಆದರೆ, ಶೇಕಡಾ 30ರಷ್ಟು ಗ್ರೇಸ್ ಅಂಕ ನೀಡದಿದ್ದರೆ ಫಲಿತಾಂಶ ಇನ್ನಷ್ಟು ಇಳಿಕೆಯಾಗಿ ಲಕ್ಷಾಂತರ ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಮೂಲಕ ಶಿಕ್ಷಣ ಇಲಾಖೆ ಇನ್ನಷ್ಟು ಕಳಪೆ ಫಲಿತಾಂಶ ದಾಖಲಿಸುತ್ತಿತ್ತು ಎಂಬುದು ಆಗ ಎಲ್ಲರಿಗೂ ಮನವರಿಕೆಯಾಯಿತು.
ಕಳಪೆ ಫಲಿತಾಂಶಕ್ಕೆ ಹಲವಾರು ಮೂಲಭೂತ ಕಾರಣವಿದ್ದರೂ, ಆ ಸಮಯದಲ್ಲಿ ಪರೀಕ್ಷಾ ಮಂಡಳಿಯವರು ಪರೀಕ್ಷಾ ಅಕ್ರಮ ತಡೆಗಟ್ಟಲು ಕಡ್ಡಾಯವಾಗಿ ಜಾರಿಗೊಳಿಸಿದ ವೆಬ್ ಕಾಸ್ಟಿಂಗ್ ನಿಯಮವೇ ಎಲ್ಲದಕ್ಕೂ ಕಾರಣವೆಂಬಂತೆ ಬಿಂಬಿಸಲಾಯಿತು. ವಾಸ್ತವದಲ್ಲಿ ಪರೀಕ್ಷಾ ಅಕ್ರಮ ತಡೆಗೆ ಕೈಗೊಂಡಿರುವ ಎ ಕ್ರಮಗಳು ಅತ್ಯಂತ ಸ್ವಾಗತಾರ್ಹವಾಗಿದ್ದವು. ಆದರೆ, ಇಲಾಖೆ ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ವೆಬ್ ಕಾಸ್ಟಿಂಗ್ ವ್ಯವಸ್ಥೆಯ ಮೇಲೆ ಗೂಬೆ ಕೂರಿಸುವುದು ಶುದ್ಧ ಮೂರ್ಖತನ. ಇದರರ್ಥ ಇಷ್ಟು ವರ್ಷ ರಾಜ್ಯದಲ್ಲಿ ವೆಬ್ ಕಾಸ್ಟಿಂಗ್ ಇಲ್ಲದೇ, ಪರೀಕ್ಷಾ ಅಕ್ರಮ ನಡೆಯುತ್ತಿದ್ದ ಕಾರಣಕ್ಕೆ ಉತ್ತಮ ಫಲಿತಾಂಶ ಬಂದ ಹಾಗಾಯಿತ್ತಲ್ಲವೇ? ಅದೇನೇ ಇರಲಿ, ಈ ಬಾರಿ ಶಿಕ್ಷಣ ಸಚಿವರು ಶೇ.20ರಷ್ಟು ಹೆಚ್ಚುವರಿ ಗ್ರೇಸ್ ಅಂಕ ನೀಡುವುದಿಲ್ಲ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸುವ ಮೂಲಕ ಗ್ರೇಸ್ ಅಂಕಗಳ ಕುರಿತಂತೆ ಶಿಕ್ಷಣ ಇಲಾಖೆಯ ನಿಲುವನ್ನು ಸ್ಪಷ್ಟಪಡಿಸಿದ್ದು ಒಳ್ಳೆಯ ನಿರ್ಧಾರ.
ಪರೀಕ್ಷಾ ವ್ಯವಸ್ಥೆಯಲ್ಲಿ ಗ್ರೇಸ್ ಅಂಕ ನೀಡಲು ಕಾರಣವೆಂದರೆ, ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾದ ಯಾವುದಾದರೂ ಪ್ರಶ್ನೆ ಈಗಾಗಲೇ ಇಲಾಖೆ ನೀಡಿರುವ ಪಠ್ಯಕ್ರಮದ ಹೊರತಾಗಿ ಕೇಳಲಾಗಿದ್ದರೆ, ತಪ್ಪಾದ ಪ್ರಶ್ನೆಗಳನ್ನು ಕೇಳಲಾಗಿದ್ದರೆ ಅಥವಾ ವ್ಯಾಕರಣ ದೋಷ, ಮುದ್ರಣ ದೋಷಗಳಿಂದ ಕೂಡಿದ ಅಸ್ಪಷ್ಟ ಪ್ರಶ್ನೆಗಳಿದ್ದ ಸಂದರ್ಭದಲ್ಲಿ ಮಾತ್ರ ತಜ್ಞರ ಸಮಿತಿಯ ವಿಮರ್ಶೆಯ ನಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದೆಂದು ಅಂತಹ ಪ್ರಶ್ನೆಗಳಿಗೆ ಮೀಸಲಾಗಿರುವ ಅಂಕಗಳನ್ನು ಉಚಿತವಾಗಿ ನೀಡುವುದೇ ಗ್ರೇಸ್ ಅಂಕ. ಇದರ ಹೊರತಾಗಿ ಒಂದು ವೇಳೆ ವಿದ್ಯಾರ್ಥಿಯು ಒಂದು ಅಥವಾ ಎರಡು ವಿಷಯದಲ್ಲಿ ಕನಿಷ್ಠ ಅರ್ಹತಾ ಅಂಕಗಳಿಗಿಂತ ಒಂದೆರಡು ಅಂಕಗಳು ಕಡಿಮೆ ತೆಗೆದುಕೊಂಡ ಸಮಯದಲ್ಲಿ ವಿದ್ಯಾರ್ಥಿಯ ಭವಿಷ್ಯದ ಕುರಿತಾಗಿ ಹೆಚ್ಚುವರಿ ಒಂದೆರಡು ಅಂಕಗಳನ್ನು ಗ್ರೇಸ್ ರೂಪದಲ್ಲಿ ನೀಡುವ ಕ್ರಮವೂ ಇದೆ. ಈ ವಿಧಾನದಲ್ಲಿ ನೀಡಲಾಗುವ ಗ್ರೇಸ್ ಅಂಕಗಳು ಸ್ವಾಗತಾರ್ಹವೇ. ಆದರೆ, ಇದರ ಹೊರತಾಗಿ ತಾವು ಹಾಗೂ ತಮ್ಮ ಸರಕಾರ, ಇಲಾಖೆ ಗ್ರೇಟ್ ಎನಿಸಿಕೊಳ್ಳಲು ನಿಟ್ಟಿನಲ್ಲಿ ನೀಡಲಾಗುವ ಗ್ರೇಸ್ ಅಂಕಗಳು ಖಂಡಿತವಾಗಿಯೂ ಅವೈಜ್ಞಾನಿಕವೇ ಸರಿ.
ಹತ್ತನೇ ತರಗತಿ ಪರೀಕ್ಷೆಯಾಗಲಿ ಇತರ ಯಾವುದೇ ಶೈಕ್ಷಣಿಕ ಮಟ್ಟದ ಪರೀಕ್ಷೆಯಾಗಲಿ (ಸ್ಪರ್ಧಾತ್ಮಕ ಪರೀಕ್ಷೆಯನ್ನುಹೊರತು ಪಡಿಸಿ) ಅಲ್ಲಿ ಸಿದ್ಧಪಡಿಸುವ ಪ್ರಶ್ನೆ ಪತ್ರಿಕೆಯ ನೀಲನಕ್ಷೆಯ ಕುರಿತಾದ ವಿವರವನ್ನು ಈ ಮೊದಲೇ ಇಲಾಖೆ ಪಠ್ಯಪುಸ್ತಕದ ನೀಡಿರುತ್ತಾರೆ. ಅದಕ್ಕಿಂತಲೂ ಮುಖ್ಯವಾಗಿ ಪ್ರಶ್ನೆ ಪತ್ರಿಕೆಯು ಎ ಕಲಿಕಾ ಹಂತದ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿರುತ್ತದೆ. ಯಾವುದೇ ಮಕ್ಕಳನ್ನು ಉದ್ದೇಶಪೂರ್ವಕವಾಗಿ ನಪಾಸು ಮಾಡಬೇಕೆಂಬ ಉದ್ದೇಶದಿಂದ ಸಿದ್ಧಪಡಿಸಿರುವುದಿಲ್ಲ. ಮಗು ತಾನು ವರ್ಷಪೂರ್ತಿ ಗ್ರಹಿಸಿದ ವಿಷಯವನ್ನು ಕೇವಲ ಮೂರು ಗಂಟೆಯ ಅವಧಿಯಲ್ಲಿ ಉತ್ತರಿಸಲು ಸಾಧ್ಯವಾಗುವಂತೆ ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದೇನು ಐಎಎಸ್ ಮಾದರಿ ಪರೀಕ್ಷೆಯಾಗಿರುವುದಿಲ್ಲ. ಇಷ್ಟೆ ಪೂರ್ವನಿರ್ಧಾರಿತ ಮಾನದಂಡಗಳ ಜೊತೆ 20 ಅಂಕಗಳನ್ನು ಆಂತರಿಕ ಕ್ರಿಯಾಯೋಜನೆಗೆಂದು ಶಾಲಾ ಮಟ್ಟದಲ್ಲಿ ಶಿಕ್ಷಕರು ನೀಡಿದ ಬಳಿಕ, ವಾರ್ಷಿಕ ಪರೀಕ್ಷೆಯಲ್ಲಿ 80 ಅಂಕಗಳು ಸೇರಿ ಒಟ್ಟಾರೆ ನೂರಕ್ಕೆ 35 ಅಂಕಗಳನ್ನು ವಿದ್ಯಾರ್ಥಿ ಪಡೆಯಲು ಸೋಲುತ್ತಿದ್ದಾನೆ ಎಂದಾದರೆ ಇದು ಯಾರ ತಪ್ಪು ಎಂಬುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದನ್ನು ಬಿಟ್ಟು, ಇದನ್ನು ಮುಚ್ಚಿ ಹಾಕಲು ಪುನಃ ಶೇ.20 ಹೆಚ್ಚುವರಿ ಅಂಕ ನೀಡಿ ಪಾಸು ಮಾಡುವ ಪದ್ಧತಿ ಅವಾಸ್ತವಿಕವಲ್ಲದೇ ಮತ್ತೇನು?
ರಾಜ್ಯ ಪಠ್ಯಕ್ರಮ ಹೊರತಾಗಿ ನಡೆಯುವ ಸಿಬಿಎಸ್ಇ ಹಾಗೂ ಐಸಿಎಸ್ಇ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ರಾಜ್ಯ ಪಠ್ಯಕ್ರಮದ ಪ್ರಶ್ನೆ ಪತ್ರಿಕೆಗಳಿಗಿಂತ ಕ್ಲಿಷ್ಟಕರ. ಆದರೂ, ಅಲ್ಲಿ ಅನಗತ್ಯ ಗ್ರೇಸ್ ಅಂಕ ನೀಡಿ ಪಾಸು ಮಾಡುವ ಪದ್ಧತಿ ಇಲ್ಲ. ಅವರು ಸಹ ರಾಜ್ಯ ಶಿಕ್ಷಣ ಇಲಾಖೆಯಂತೆ ತಮ್ಮ ತಮ್ಮ ಇಲಾಖೆಯ ಮಾನ ಮರ್ಯಾದೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗ್ರೇಸ್ ಅಂಕಗಳ ಮೊರೆ ಹೋಗಬಹುದಿತ್ತಲ್ಲವೇ? ಅವರೆಲ್ಲ ಶಿಕ್ಷಣದ ಗುಣಮಟ್ಟದ ವಿಷಯದಲ್ಲಿ ನಮ್ಮ ಹಾಗೇ ಯಾವುದೇ ರಾಜಿಯಾಗುವುದಿಲ್ಲ. ಅವರ ಶೈಕ್ಷಣಿಕ ಕ್ರಿಯಾಯೋಜನೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಒಂದು ತಿಂಗಳ ಮೊದಲೇ ಶಾಲೆಗಳಿಗೆ ನೀಡಲಾಗಿರುತ್ತದೆ. ಮಧ್ಯದಲ್ಲಿ ಯಾವುದೇ ಅನಗತ್ಯ ಹೊಸ ಹೊಸ ಯೋಜನೆ ಹೇರುವುದಿಲ್ಲ. ಶಾಲೆ ಹಾಗೂ ಶಿಕ್ಷಕರನ್ನು ಅನಗತ್ಯವಾದ ಇಲಾಖಾ ಕೆಲಸದ ಜಾಲದಲ್ಲಿ ಸಿಲುಕಿ ಹಾಕುವುದಿಲ್ಲ. ಆದರೆ, ನಮ್ಮಲ್ಲಿ ಗುಣಮಟ್ಟದ ಶಿಕ್ಷಣ ಬಿಟ್ಟು ಬೇರೆ ಕೆಲಸಕ್ಕಾಗಿ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತದೆ. ಇದರ ವಿರುದ್ಧವಾಗಿ ಯಾವೊಬ್ಬ ಶಿಕ್ಷಕನಾಗಲಿ, ಶಿಕ್ಷಕರ ಸಂಘವಾಗಲಿ ಶಿಕ್ಷಣ ಇಲಾಖೆಯ ಅವೈಜ್ಞಾನಿಕ ನೀತಿಗಳ ವಿರುದ್ಧ ಹೋರಾಟ ನಡೆಸದಿರುವುದು ದುರಂತವೇ ಸರಿ. ಇಲ್ಲಿ ಯಾರಿಗೂ ಮಕ್ಕಳ ಅಭಿವೃದ್ಧಿಯ ಬಗ್ಗೆ ಅಷ್ಟಾಗಿ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಬಹುಶಃ ತಮ್ಮ ಮಕ್ಕಳೆ ಒಳ್ಳೆಯ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆಂಬ ಕಾರಣವೋ ಏನೋ?
ಗ್ರೇಸ್ ಅಂಕವನ್ನು ಪುಕ್ಕಟ್ಟೆಯಾಗಿ ಮಕ್ಕಳಿಗೆ ನೀಡಿ ಹೆಚ್ಚೆಚ್ಚು ಫಲಿತಾಂಶ ತೋರಿಸಿ ಇವೆಲ್ಲವೂ ನಮ್ಮ ಆಡಳಿತದ ಸಾಧನೆ ಎಂದು ಬೀಗುವ ಸಚಿವರು, ಇಲಾಖಾ ಸಿಬ್ಬಂದಿ ಇದೇ ವಿದ್ಯಾರ್ಥಿ ಮುಂದೆ ದ್ವಿತೀಯ ಪಿಯುಸಿಯಲ್ಲಿ ವಿಷಯ eನದ ಕೊರತೆಯಿಂದಾಗಿ ಫೇಲ್ ಆಗುತ್ತಾರೆ ಎಂಬ ಪರಿವೆ ಹೊಂದಿರಬೇಕಲ್ಲವೇ? ಶಿಕ್ಷಣ ವ್ಯವಸ್ಥೆಯಲ್ಲಿ ತುರ್ತು ಪರಿಸ್ಥಿತಿ ಹೊರತುಪಡಿಸಿ ಗ್ರೇಸ್ ಅಂಕಗಳ ಮೊರೆ ಹೋಗುವುದನ್ನು ನಿಲ್ಲಿಸಬೇಕಿದೆ. ಗ್ರೇಸ್ ಅಂಕವೇ ನೀಡುವುದಾದರೆ ಮಕ್ಕಳು ಶಾಲೆಗೆ ಹೋಗಿ ಕಲಿಯುವ ಅಗತ್ಯತೆ ಏನಿದೆ ಅಲ್ಲವೇ? ಗ್ರೇಸ್ ಅಂಕದಿಂದ ಪಡೆದ ಅಂಕಗಳೆಲ್ಲವೂ ಅನೈತಿಕವೆಂದೆ ಪರಿಗಣಿತವಾಗುತ್ತದೆ.
ಇನ್ನು ಶಾಲೆಯಲ್ಲಿ ನೀಡಲಾಗುವ ೨೦ ಆಂತರಿಕ ಅಂಕಗಳು ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಹೊಂದಾಣಿಕೆ ಆಗಬೇಕೆಂಬುದು ಸೂಕ್ತವಲ್ಲ. ಏಕೆಂದರೆ ಕಿರುಪರೀಕ್ಷೆಯ ವಿಷಯ ಹಾಗೂ ಶೈPಣಿಕ ಚಟವಟಿಕೆಯ ವ್ಯಾಪ್ತಿ ತೀರಾ ಕಿರಿದಾಗಿರುತ್ತದೆ. ಮಗು ಸೀಮಿತ ವಿಷಯವನ್ನು ಚೆನ್ನಾಗಿ ಗ್ರಹಿಸುವ ಸಾಮರ್ಥ್ಯ ಹೊಂದಿರಬಹುದು. ಅದುವೇ ವಾರ್ಷಿಕ ಪರೀಕ್ಷೆಯ ವಿಷಯ ವ್ಯಾಪ್ತಿ ವಿಶಾಲವಾಗಿದ್ದು, ಪ್ರಶ್ನೆ ಪತ್ರಿಕೆಯನ್ನು ನುರಿತ ವಿಷಯ ತಜ್ಞರು ಸಿದ್ಧಪಡಿಸಿರುತ್ತಾರೆ. ಅದನ್ನು ಕಿರುಪರೀಕ್ಷೆಯ ಪ್ರಶ್ನೆ ಪತ್ರಿಕೆಯೊಂದಿಗೆ ಹೋಲಿಸುವುದು ಸಮಂಜಸವಲ್ಲ. ಏನೇ ಆಗಲಿ ರಾಜ್ಯ ಹಾಗೂ ದೇಶಾದ್ಯಂತ ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ದಿನೇ ದಿನೇ ಇಳಿಮುಖವಾಗುತ್ತಿದೆ. ಇದಕ್ಕೆ ಹತ್ತಾರು ಕಾರಣಗಳಿವೆ. ಅವೆಲ್ಲವೂ ಎಲ್ಲರಿಗೂ ತಿಳಿದಿರುವ ಸಂಗತಿಯೇ. ಅದನ್ನೆ ಮುಚ್ಚಿ ಹಾಕಲು ಗ್ರೇಸ್ ಅಂಕವೆಂಬ ಅಕ್ರಮ ಮಾರ್ಗಕ್ಕೆ ಶರಣಾಗುವುದು ತಪ್ಪು.
ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರಕಾರ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆ ವಿನಃ ಪರೀಕ್ಷಾ ಸಮಯದಲ್ಲಿ ಕೇವಲ ಫಲಿತಾಂಶ ಹೆಚ್ಚಿಸಲು ನೀಡಲಾಗುವ ಗ್ರೇಸ್ ಅಂಕಗಳಂತಹ ಅವೈಜ್ಞಾನಿಕ ಹಾಗೂ ಅನೈತಿಕ ಕ್ರಮಗಳನ್ನು ಮೊದಲು ಕೈಬಿಡಬೇಕಿದೆ. ಏನೇ ಆಗಲಿ ಈ ಬಾರಿ ಗ್ರೇಸ್ ಅಂಕ ಕೈ ಬಿಟ್ಟಿರುವುದು ಒಳ್ಳೆಯ ನಿರ್ಧಾರ. ಆದರೆ, ಪ್ರಸ್ತುತ ಇರುವ ಹಲವಾರು ಸಮಸ್ಯೆಗಳ ನಡುವೆಯೂ ಗ್ರೇಸ್ ಅಂಕವಿಲ್ಲದೇ ಈ ಬಾರಿ ನೂರಕ್ಕೆ ನೂರು ಫಲಿತಾಂಶ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಶಿಕ್ಷಣ ಸಚಿವರ ಆಶಯ ಎಷ್ಟರ ಮಟ್ಟಿಗೆ ನಿಜವಾಗಲಿದೆ ಎಂದು ಕಾದು ನೋಡಬೇಕಿದೆ.
– ಸುರೇಂದ್ರ ಪೈ ಭಟ್ಕಳ
ಶಿಕ್ಷಕ, ಬರಹಗಾರ