ಚಾಮರಾಜನಗರದಲ್ಲಿ ಕೆರೆ ತುಂಬಿಸಲು ಕಾಂಗ್ರೆಸ್ ಸರ್ಕಾರ ನೀರಾವರಿ ಇಲಾಖೆಗೆ 200-300 ಕೋಟಿ ರೂ. ಅನುದಾನ ನೀಡಬೇಕು. ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಕ್ರಮ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಆಗ್ರಹಿಸಿದರು.
ರೈತರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿ ನಿಂದಲೂ ರೈತರ ವಿರೋಧಿಯಾಗಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 230 ಕೋಟಿ ರೂ. ಅನುದಾನ ನೀಡಿ ಎಲ್ಲ ಕೆರೆಗಳಿಗೆ ನೀರು ತುಂಬಿಸಿದ್ದರು. ಕಾಂಗ್ರೆಸ್ ಬಂದ ನಂತರ ನೀರಾವರಿ ಯೋಜನೆಗಳ ಅನುದಾನವನ್ನು ಬೇರೆ ಕಡೆ ವರ್ಗಾಯಿಸಲಾಗಿದೆ. ನೀರಾವರಿ ಇಲಾಖೆಯ ಅನುದಾನವನ್ನು ಶೇ.30 ರಷ್ಟು ಕಡಿಮೆ ಮಾಡಲಾಗಿದೆ. ವರ್ಷದಿಂದ ವರ್ಷಕ್ಕೆ ಪ್ರತಿ ಇಲಾಖೆಗೆ ಅನುದಾನ ಹೆಚ್ಚಿಸಬೇಕಿತ್ತು. ಇಲ್ಲಿ ರೈತರು ಹೋರಾಟ ಮಾಡುತ್ತಿದ್ದರೂ, ಸರ್ಕಾರ ಸ್ಪಂದಿಸಿಲ್ಲ ಎಂದರು.
ಬಿಜೆಪಿ ಅವಧಿಯಲ್ಲಿ ಮಾಡಿದ್ದಂತೆಯೇ ಕಾಂಗ್ರೆಸ್ ಸರ್ಕಾರ 200-300 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದರೆ ಖಜಾನೆ ಖಾಲಿಯಾಗಿದೆ ಎಂದು ಒಪ್ಪಿಕೊಳ್ಳಬೇಕು. ಬಿಜೆಪಿ ಅವಧಿಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ ವಹಿಸಲಾಗಿತ್ತು. ಚಾಮರಾಜನಗರದಲ್ಲಿ ಹುಲಿ ಹಾಗೂ ಆನೆ ದಾಳಿ ಸ್ಥಳೀಯರು ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆಯಿಂದ ಯಾವುದೇ ಕ್ರಮ ವಹಿಸಿಲ್ಲ ಎಂದು ಹೇಳಿದರು.
ಬಗರ್‌ಹುಕುಂ ಅಡಿಯಲ್ಲಿ ಕೃಷಿ ಮಾಡುತ್ತಿದ್ದವರಿಗೆ ನಮ್ಮ ಸರ್ಕಾರದಿಂದ ಹಕ್ಕುಪತ್ರ ನೀಡಲಾಗಿತ್ತು. ಈಗ ಇಂತಹ ಕೆಲಸ ನಡೆಯುತ್ತಿಲ್ಲ. ಸರ್ಕಾರ ಇನ್ನೂ ಬದುಕಿದ್ದರೆ ರೈತರ ಅಹವಾಲುಗಳನ್ನು ಆಲಿಸಿ ಸಮಸ್ಯೆ ಬಗೆಹರಿಸಬೇಕು. ಹಾಗೆಯೇ ಬೇರೆ ಬೇರೆ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ಮಾಡುತ್ತಿದ್ದು, ಬೆಂಬಲ ಬೆಲೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಬಿಟ್ಟು ಕ್ರಮ ವಹಿಸಲಿ ಎಂದರು.
ಯೋಧರ ಜಾತಿ ಕೇಳುವ ರಾಹುಲ್ ಗಾಂಧಿಗೆ ನಾಚಿಕೆ ಇಲ್ಲ. ಅವರಿಗೆ ಸೋಲಿನ ಭೀತಿಯಿಂದಾಗಿ ಹೀಗೆಲ್ಲ ಮಾತಾಡುತ್ತಿದ್ದಾರೆ. ಇಂತಹವರನ್ನು ವಿರೋಧ ಪಕ್ಷದ ನಾಯಕನಾಗಿ ನೇಮಕ ಮಾಡಿರುವುದೇ ತಪ್ಪು ಎಂದು ಟೀಕಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಬಿಜೆಪಿಯ ನೆರವು ಬೇಕಿಲ್ಲ. ಇದು ಇಡೀ ದೇಶದಾದ್ಯಂತ ವಿಸ್ತರಣೆಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಗೆ ನಾವ್ಯಾರೂ ಪ್ರತಿಕ್ರಿಯೆ ನೀಡಲ್ಲ. ಆರ್‌ಎಸ್‌ಎಸ್ ಶಕ್ತಿ ಅಗಾಧವಾಗಿದ್ದು, ಅದನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್‌ನಲ್ಲಿ ಯಾರೇ ಸಿಎಂ ಆದರೂ ನಮಗೆ ಅಭ್ಯಂತರವಿಲ್ಲ. ಆದರೆ ಮೊದಲು ಅಭಿವೃದ್ಧಿ ಕಾರ್ಯ ಮಾಡಲಿ. ಪ್ರತಿ ಇಲಾಖೆಯಲ್ಲಿ ಅನುದಾನವನ್ನೇ ಇನ್ನೂ ಖರ್ಚು ಮಾಡಿಲ್ಲ. ಬಿಹಾರ ಚುನಾವಣೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹಣ ಕಳುಹಿಸುತ್ತಿದ್ದಾರೆ. ಕರ್ನಾಟಕ ಎಂದರೆ ಬಿಹಾರ ಚುನಾವಣೆಯ ಎಟಿಎಂ ಆಗಿದೆ ಎಂದು ದೂರಿದರು.


