Menu

ಮತ್ತೆ ದಾಳಿಯಾದ್ರೆ ಯಾವ ಒತ್ತಡಕ್ಕೂ ಮಣಿಯದೆ ಅನಿಯಂತ್ರಿತ ಪ್ರತಿದಾಳಿ ಎಚ್ಚರಿಕೆಯಿತ್ತ ಇರಾನ್‌

ತನ್ನ ಇಂಧನ ಮೂಲಸೌಕರ್ಯದ ಮೇಲೆ ನಡೆದ ದಾಳಿಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮತ್ತೊಮ್ಮೆ ಇಂತಹ ದಾಳಿ ನಡೆದರೆ ಯಾವುದೇ ಒತ್ತಡಕ್ಕೂ ಮಣಿಯದೆ ಅನಿಯಂತ್ರಿತ ಪ್ರತಿದಾಳಿ ನಡೆಸುವುದಾಗಿ ಸ್ಪಷ್ಟ ಎಚ್ಚರಿಕೆ ನೀಡಿದೆ. ಇರಾನ್‌- ಇಸ್ರೇಲ್‌ ಸಂಘರ್ಷದ ನಡುವೆ ಅಮೆರಿಕ ಇರಾನ್‌ ವಿರುದ್ಧ ಸೇನಾ ಕಾರ್ಯಚರಣೆ ನಡೆಸಿದ ಬಳಿಕ ಯುದ್ಧ ತೀವ್ರಗೊಂಡು ಮಧ್ಯಪ್ರಾಚ್ಯ ದೇಶಗಳ ಸ್ಥಿತಿಗತಿ ಬಿಗಡಾಯಿಸುವ ಜೊತೆಗೆ ಅವುಗಳನ್ನು ಅವಲಂಬಿಸಿರುವ ರಾಷ್ಟ್ರಗಳ ಮೇಲೂ ದುಷ್ಪರಿಣಾಮ ಬೀರಿದೆ.

ಇಂಧನ ಮೂಲಸೌಕರ್ಯದ ಮೇಲೆ ದಾಳಿ ಮಾಡಿ ದೊಡ್ಡ ತಪ್ಪು ಮಾಡಿದ್ದೀರಿ, ಮತ್ತೆ ದಾಳಿ ನಡೆಸಿದರೆ ಗಲ್ಫ್ ಪ್ರದೇಶದ ತೈಲ ಹಾಗೂ ಅನಿಲ ವಲಯವನ್ನು ಸಂಪೂರ್ಣ ನಾಶಪಡಿಸುವುದಾಗಿ ಇಸ್ರೇಲ್‌ಗೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಎಚ್ಚರಿಕೆ ನೀಡಿದೆ. ದಾಳಿ ಮತ್ತೆ ಪುನರಾವರ್ತನೆಯಾದರೆ, ನಿಮ್ಮ ಇಂಧನ ಮೂಲಸೌಕರ್ಯ ಹಾಗೂ ನಿಮ್ಮ ಮಿತ್ರ ರಾಷ್ಟ್ರಗಳ ಮೇಲಿನ ದಾಳಿಗಳು ಸಂಪೂರ್ಣ ನಾಶವಾಗುವವರೆಗೆ ನಿಲ್ಲುವುದಿಲ್ಲ. ಇದೀಗ ನಡೆದಿರುವ ದಾಳಿಗಿಂತ ನಮ್ಮ ಪ್ರತಿಕ್ರಿಯೆ ಇನ್ನಷ್ಟು ತೀವ್ರವಾಗಿರುತ್ತದೆ ಎಂದು ಹೇಳಿದೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಇಸ್ರೇಲ್’ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ನಮ್ಮ ಇಂಧನ ಮೂಲಸೌಕರ್ಯಗಳ ಮೇಲೆ ಮತ್ತೆ ದಾಳಿ ನಡೆದರೆ ಯಾವುದೇ ತಡೆ ಇಲ್ಲದೆ ತೀವ್ರ ರೀತಿ ಪ್ರತಿಕ್ರಿಯೆ ನೀಡುತ್ತೇವೆಂದು ಹೇಳಿದ್ದಾರೆ. ಈಗಾಗಲೇ ನಡೆದ ಪ್ರತಿದಾಳಿಗಳಲ್ಲಿ ನಮ್ಮ ಶಕ್ತಿಯ ಸ್ವಲ್ಪ ಭಾಗ ಬಳಸಿದ್ದೇವೆ. ಅಂತರರಾಷ್ಟ್ರೀಯ ಒತ್ತಡದಿಂದ ನಿಯಂತ್ರಣ ತೋರಿಸಿದ್ದೇವೆ, ಮುಂದಿನ ದಾಳಿಯಲ್ಲಿ ಆ ನಿಯಂತ್ರಣ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಇರಾನ್‌ನ ಬುಶೆಹರ್ ಪ್ರಾಂತ್ಯದ ಕರಾವಳಿಯಲ್ಲಿರುವ ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರ ಸೌತ್ ಪಾರ್ಸ್ ಕ್ಷೇತ್ರಕ್ಕೆ ಸಂಬಂಧಿಸಿದ ನೈಸರ್ಗಿಕ ಅನಿಲ ಸೌಲಭ್ಯಗಳ ಮೇಲೆ ದಾಳಿ ನಡೆದಿರುವುದಾಗಿ ಇರಾನ್ ಈ ಹಿಂದೆ ಹೇಳಿಕೆ ನೀಡಿತ್ತು. ಬಳಿಕ ಇರಾನಿನ ಕ್ಷಿಪಣಿ ದಾಳಿ ಖತರ್‌ ನ ರಾಸ್ ಲಫಾನ್ ಅನಿಲ ಸೌಲಭ್ಯವನ್ನು ಹಾನಿಗೊಳಿಸಿದ್ದು, ಗಲ್ಫ್ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.

Related Posts

Leave a Reply

Your email address will not be published. Required fields are marked *