ಇಸ್ರೇಲ್ ಮತ್ತು ಇರಾನ್ ನಡುವಣ ಯುದ್ಧ ದಿನದಿಂದ ದಿನಕ್ಕೆ ವಿಕೋಪಕ್ಕೆ ತಿರುಗುತ್ತಿದ್ದು, ಅಮೆರಿಕ ಕೂಡ ಕಾಲಿಡುತ್ತಿದ್ದಂತೆ ದಾಳಿ ಮಾಡಿದರೆ ಪ್ರತಿಕ್ರಿಯೆ ಕೊಡಲು ಸಿದ್ಧ ಎಂದು ಇರಾನ್ ಖಡಕ್ ಎಚ್ಚರಿಕೆ ನೀಡಿದೆ.
ಇಸ್ರೇಲ್ ಮತ್ತು ಇರಾನ್ ನಡುವಣ ಯುದ್ಧ 7ನೇ ದಿನಕ್ಕೆ ಕಾಲಿಡುತ್ತಿದೆ. ಈ ವೇಳೆ ಅಣು ಒಪ್ಪಂದಕ್ಕೆ ಸಹಿ ಹಾಕುವಂತೆ ಪಟ್ಟು ಹಿಡಿದಿರುವ ಅಮೆರಿಕ, ಇರಾನ್ ಅಧ್ಯಕ್ಷ ಶರಣಾಗದೇ ಇದ್ದರೆ ದಾಳಿ ನಡೆಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ರಾತ್ರಿ 9.30ಕ್ಕೆ ಸಭೆ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕ ದಾಳಿ ಮಾಡಿದರೆ ಪ್ರತಿಕ್ರಿಯೆ ನೀಡಲು ನಾವು ಸಿದ್ಧ ಎಂದು ವಿಶ್ವಸಂಸ್ಥೆಗೆ ಇರಾನ್ ಪತ್ರದ ಮೂಲಕ ಎಚ್ಚರಿಕೆ ನೀಡಿದೆ.
ಇರಾನ್ ಅಣುಸ್ಥಾವರದ ಮೇಲೆ ದಾಳಿ ನಡೆಸಲು ಇಸ್ರೇಲ್ ನಡೆಸಿರುವ ಪ್ರಯತ್ನಗಳು ವಿಫಲವಾಗುತ್ತಿದ್ದರೂ ಸಾಕಷ್ಟು ಹಾನಿ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ರಕ್ಷಣೆಯನ್ನು ಭೇದಿಸಿ ಹಲವು ನಗರಗಳ ಮೇಲೆ ದಾಳಿ ನಡೆಸುತ್ತಿದೆ.