ಅಮೆರಿಕದೊಂದಿಗೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಮಿಲಿಟರಿ ಘಟಕಗಳಿಗೆ ದಾಳಿ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಯುದ್ಧ ಅಂತ್ಯವಾಗಿಲ್ಲ, ಕದನ ವಿರಾಮವಷ್ಟೇ. ಕದನ ವಿರಾಮವು ಯುದ್ಧದ ಅಂತ್ಯವನ್ನು ಸೂಚಿಸುವುದಿಲ್ಲ ಮತ್ತು ಶತ್ರುಗಳಾದ ಅಮೆರಿಕ ಅಥವಾ ಇಸ್ರೇಲ್ ಯಾವುದೇ ರೀತಿ ತಪ್ಪಾಗಿ ವರ್ತಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಜಂಟಿ ದಾಳಿ ನಡೆಸಿ, ಯುದ್ಧದ ಮೊದಲ ದಿನದಂದು ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿವೆ. 39 ದಿನಗಳಲ್ಲಿ ದೇಶಾದ್ಯಂತ ನಡೆದ ಸಂಘರ್ಷದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.
ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ಮಾಡುವ ಗಡುವು ಪೂರ್ಣಗೊಳ್ಳುವ ಕೆಲವೇ ಗಂಟೆಗಳ ಮೊದಲು, ಟ್ರಂಪ್ ಪಾಕಿಸ್ತಾನದ ಪ್ರಸ್ತಾಪವನ್ನು ಒಪ್ಪಿಕೊಂಡಿರುವುದಾಗಿ ಹೇಳಿ ಕದನ ವಿರಾಮವನ್ನು ಘೋಷಿಸಿದ್ದಾರೆ. ಹರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಪುನಃ ತೆರೆಯಲು ಇರಾನ್ ಒಪ್ಪಿಕೊಳ್ಳುವುದರ ಮೇಲೆ ಒಪ್ಪಂದವು ಷರತ್ತುಬದ್ಧವಾಗಿದೆ ಎಂದು ಹೇಳಿದ್ದಾರೆ.
ಇಸ್ರೇಲ್ ಕೂಡ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ. ಯುದ್ಧ ಕೊನೆಗೊಳಿಸಲು ಇರಾನ್‌ನ ಷರತ್ತುಗಳನ್ನು ಟ್ರಂಪ್ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಎರಡು ವಾರಗಳ ಕದನ ವಿರಾಮ ಪ್ರಸ್ತಾವನೆಯನ್ನು ಇರಾನ್ ಒಪ್ಪಿಕೊಂಡಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದದ ಕುರಿತು ಮಾತುಕತೆ ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ. ಪಾಕಿಸ್ತಾನಿ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಕೋರಿಕೆ ಅನ್ವಯ ಟ್ರಂಪ್, ಇರಾನ್ ಮೇಲಿನ ದಾಳಿಯನ್ನು ಎರಡು ವಾರ ಸ್ಥಗಿತಗೊಳಿಸುವುದಾಗಿ ಹೇಳಿಕೊಂಡಿದ್ದಾರೆ.
ಪಾಕಿಸ್ತಾನದ ಶೇ. 90 ತೈಲವು ಹರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಮುಚ್ಚಿದರೆ ಇಂಧನ ಬಿಕ್ಕಟ್ಟನ್ನು ಹೆಚ್ಚಿಸುತ್ತಿತ್ತು, ಬೆಲೆ ಏರಿಕೆಯಾಗಿ ಆರ್ಥಿಕತೆಯ ಮೇಲೆ ಒತ್ತಡವಾಗುತ್ತಿತ್ತು. ಸೌದಿ ರಕ್ಷಣಾ ಒಪ್ಪಂದ, ಅಫ್ಘಾನಿಸ್ತಾನದಲ್ಲಿನ ಉದ್ವಿಗ್ನತೆ ಮತ್ತು ಭಾರತದೊಂದಿಗಿನ ವಿವಾದದ ನಡುವೆ ಯುದ್ಧವು ಉಲ್ಬಣಗೊಳ್ಳುವುದು ಪಾಕಿಸ್ತಾನಕ್ಕೆ ಬೇಕಿಲ್ಲ.


