ಅಮೆರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಬಳಿಕ ಲೆಬೆನಾನ್ ಮೇಲೆ ಇಸ್ರೇಲ್ ಸೇನೆ 100ಕ್ಕೂ ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಟ 250 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಮಧ್ಯೆ ಇರಾನ್ ನೌಕಾಪಡೆಯು ಹರ್ಮುಜ್ ಜಲಸಂಧಿಯ ಬಳಿಯ ಹಡಗುಗಳಿಗೆ ಟೆಹ್ರಾನ್ನ ಅನುಮತಿ ಅಗತ್ಯವಿದೆ ಎಂದು ಹೇಳುವ ಮೂಲಕ ಎಚ್ಚರಿಕೆ ರವಾನಿಸಿದೆ.
ಅನುಮತಿಯಿಲ್ಲದೆ ಹರ್ಮುಜ್ ಜಲಸಂಧಿ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗನ್ನು ಇರಾನ್ ಸೇನೆ ಹೊಡೆದುರುಳಿಸಲಿದೆ ಎಂದು ಇರಾನ್ ನೌಕಾಪಡೆಯು ರೇಡಿಯೋ ಮೂಲಕ ಹಡಗುಗಳಿಗೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.
ಈ ಜಲಸಂಧಿಯ ಮೂಲಕ ಹಾದುಹೋಗಲುಇರಾನಿನ ಸೆಪಾ ನೌಕಾಪಡೆಯಿಂದ ಅನುಮತಿ ಪಡೆಯಬೇಕು. ಯಾವುದೇ ಹಡಗು ಅನುಮತಿಯಿಲ್ಲದೆ ಸಾಗಲು ಪ್ರಯತ್ನಿಸಿದರೆ ಅದನ್ನು ನಾಶಪಡಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸಂಪೂರ್ಣ, ತಕ್ಷಣದ ಮತ್ತು ಸುರಕ್ಷಿತ ರೀತಿಯಲ್ಲಿ ಜಲಸಂಧಿಯನ್ನು ತೆರೆದರೆ ಇರಾನ್ ದಾಳಿಯನ್ನು ಎರಡು ವಾರಗಳವರೆಗೆ ಸ್ಥಗಿತಗೊಳಿಸಲು ಒಪ್ಪಿಕೊಂಡಿದ್ದೇನೆ ಎಂದು ಹೇಳಿದ ನಂತರ ಇರಾನ್ ಈ ಎಚ್ಚರಿಕೆ ನೀಡಿ ಅಚ್ಚರಿ ಹುಟ್ಟಿಸಿದೆ. ಹರ್ಮುಜ್ ಜಲಸಂಧಿಯಲ್ಲಿ ಹೆಚ್ಚಿನ ಹಡಗುಗಳು ನಿಂತಿವೆ. ಯುದ್ಧವಿಮಾನಗಳು ಇನ್ನೂ ಪರ್ಷಿಯನ್ ಕೊಲ್ಲಿಯ ಮೇಲೆ ಇವೆ ಎಂದು ಸಿಬ್ಬಂದಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.


