ಇರಾನ್‌ನಲ್ಲಿ ಎರಡು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಯು ತೀವ್ರ ಹಿಂಸಾರೂಪಕ್ಕೆ ತಿರುಗಿದೆ. ಪ್ರತಿಭಟನಾಕಾರರ ವಿರುದ್ಧ ದಾಳಿ ಮಾಡಿದರೆ ಸೇನಾ ಕಾರ್ಯಾಚರಣೆ ಮೂಲಕ ಮಧ್ಯಪ್ರವೇಶಿಸುವುದಾಗಿ ಬೆದರಿಕೆ ಹಾಕಿದ ಬಳಿಕ ಇರಾನ್ ಮಾತುಕತೆಗೆ ಮನವಿ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇರಾನ್‌ನಲ್ಲಿ ಹಣದುಬ್ಬರ, ಜೀವನ ವೆಚ್ಚ ಏರಿಕೆ ವಿರೋಧಿಸಿ ನಡೆಯುತ್ತಿರುವ ನಾಗರಿಕರ ಪ್ರತಿಭಟನೆಯು ತೀವ್ರಗೊಂಡು ಹತ್ಯಾಕಾಂಡವಾಗಿ ಬದಲಾಗುತ್ತಿದೆ ಎಂದು ಮಾನವಹಕ್ಕು ಸಂಘಟನೆಗಳು ಎಚ್ಚರಿಸಿವೆ. ಪ್ರತಿಭಟನೆ ದಮನಿಸಲು ಸರ್ಕಾರ ಇಂಟರ್ನೆಟ್ ಸೇವೆ ಹಾಗೂ ವಿದ್ಯುತ್ ಕಡಿತ ಸೇರಿದಂತೆ ಎಲ್ಲ ಪ್ರಯತ್ನಗಳನ್ನು ಸರ್ಕಾರ ಮಾಡಿದೆ. ಪ್ರತಿಭಟನೆಯ ಕಾವು ಕೂಡ ಹೆಚ್ಚುತ್ತಲೇ ಇದೆ. ಹಿಂಸಾಚಾರಕ್ಕೆ 200ಕ್ಕೂ ಹೆಚ್ಚು ಜನರು ಬಲಿಆಗಿದ್ದು, 40 ಮಂದಿ ಭದ್ರತಾ ಸಿಬ್ಬಂದಿ ಎಂದು ಹೇಳಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್ , ಪ್ರತಿಭಟನಾಕಾರರ ವಿರುದ್ಧ ದಾಳಿ ಮಾಡಿದರೆ ಸೇನಾ ಕಾರ್ಯಾಚರಣೆ ಮೂಲಕ ಮಧ್ಯಪ್ರವೇಶ ಮಾಡುವುದಾಗಿ ಬೆದರಿಕೆ ಹಾಕಿದ ಬಳಿಕ ಇರಾನ್ ಮಾತುಕತೆಗೆ ಮುಂದಾಗಿದೆ ಎಂದು ಹೇಳಿದ್ದಾರೆ. ಇರಾನ್ ನಾಯಕರು ಕರೆ ಮಾಡಿದ್ದರು. ಸಭೆಗೆ ಸಿದ್ಧತೆ ನಡೆಯುತ್ತಿದೆ,ಅವರಿಗೆ ಸಂಧಾನ ಬೇಕಿದೆ. ಸಭೆಗೂ ಮೊದಲೇ ನಾವು ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು ಎಂದು ತಿಳಿಸಿದ್ದಾರೆ.


