ಇಸ್ರೇಲ್ ವಾಯುಪಡೆ ಟೆಹ್ರಾನ್ನಲ್ಲಿರುವ ಇರಾನ್ ಸ್ಟೇಟ್ ಬ್ರಾಡ್ಕಾಸ್ಟರ್ ಏಜೆನ್ಸಿ IRIB ಕಚೇರಿಯಲ್ಲಿ ನಿರೂಪಕಿ ಸುದ್ದಿ ಓದುತ್ತಿರುವಾಗಲೇ ದಾಳಿ ನಡೆಸಿದೆ. ಇದರಿಂದ ಸುದ್ದಿ ಪ್ರಸಾರಕ್ಕೆ ತಡೆಯುಂಟಾಯಿತು. ಕಚೇರಿ ಮೇಲೆ ನಡೆದ ದಾಳಿಯು ವೀಡಿಯೊದಲ್ಲಿ ದಾಖಲಾಗಿ ಪ್ರಸಾರವಾಗಿದೆ. ದಾಳಿ ಆಗುತ್ತಿದ್ದಂತೆ ನಿರೂಪಕಿ ಓಡಿ ಹೋಗಿದ್ದಾರೆ. ಗೋಡೆಗಳು ಉದುರುತ್ತಿರುವ ದೃಶ್ಯ ಸ್ಟುಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಸ್ರೇಲ್ ರಕ್ಷಣಾ ಪಡೆ ಈ ಹಿಂದೆ IRIB ಪ್ರಧಾನ ಕಚೇರಿಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ತುರ್ತು ಎಚ್ಚರಿಕೆ ನೀಡಿತ್ತು.
ಇರಾನ್ ಮತ್ತು ಇಸ್ರೇಲ್ ಮಧ್ಯೆ ಯುದ್ಧ ತೀವ್ರಗೊಂಡಿದ್ದು, ಜಾಗತಿಕ ವಿದ್ಯಮಾನಗಳ ಮೇಲೂ ಪ್ರಭಾವ ತೋರಲಾರಂಭಿಸಿದೆ. ಪೆಟ್ರೋಲ್ ಸೇರಿದಂತೆ ಹಲವು ವಸ್ತುಗಳ ಆಮದು ಬಂದ್ ಆಗುವ ಸಾಧ್ಯತೆಯಿದ್ದು, ಜನಜೀವನದಲ್ಲಿ ಬಹಳಷ್ಟು ಸಂಕಷ್ಟಕ್ಕೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಎರಡೂ ರಾಷ್ಟ್ರಗಳು ಪರಸ್ಪರ ದಾಳಿ ಪ್ರತಿದಾಳಿ ಮುಂದುವರಿಸಿದ್ದು, ಸೇನಾ ನೆಲೆಗಳು ಮಾತ್ರವಲ್ಲದೆ ನಾಗರಿಕ ಮೂಲ ಸೌಕರ್ಯ, ಜನವಸತಿ ಪ್ರದೇಶಗಳಲ್ಲೂ ದಾಳಿ ನಡೆಯುತ್ತಿದೆ.
4 ದಿನಗಳ ಈ ಯುದ್ಧದಲ್ಲಿ ಎರಡೂ ಕಡೆ ಈವರೆಗೆ 224 ಮಂದಿ ಸಾವನ್ನಪ್ಪಿದ್ದರೆ, 1,300ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇಸ್ರೇಲ್‌ನ ಹೈಫಾ, ಟೆಲ್‌ಅವಿವ್ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿದೆ. ಹೈಫಾದ 2 ಪವರ್ ಪ್ಲಾಂಟ್‌ಗಳನ್ನು ಧ್ವಂಸಗೊಳಿಸಿದೆ. ಟೆಲ್‌ಅವಿವ್‌ನ ಪ್ರಧಾನಿ ನೆತನ್ಯಾಹು ಮನೆ ಮೇಲೆ ಮಿಸೈಲ್ ದಾಳಿ ಮಾಡಿದೆ. ನೆತನ್ಯಾಹು ಪಾರಾಗಿದ್ದಾರೆ. ಬೆನ್ನಲ್ಲೇ ಇಸ್ರೇಲ್ ಆಕ್ರಮಣವನ್ನು ಮತ್ತಷ್ಟು ತೀವ್ರಗೊಳಿಸಿದೆ. ಇರಾನ್‌ನ ತೈಲ-ಅನಿಲ ಘಟಕ, ಮಿಲಿಟರಿ ಸೆಂಟರ್‌ಗಳ ಮೇಲೆ ಇಸ್ರೇಲ್ ಬಾಂಬ್ ಮಳೆ ಸುರಿಸಿದೆ. ಇರಾನ್‌ನ ನಾಲ್ವರು ಗುಪ್ತಚರ ಅಧಿಕಾರಿಗಳು ಬಲಿಯಾಗಿದ್ದಾರೆ.
ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಮಾತುಕತೆಗಳನ್ನು ಪುನರಾರಂಭಿಸುವ ಬಯಕೆಯನ್ನು ಇರಾನ್ ವ್ಯಕ್ತಪಡಿಸಿ ಇಸ್ರೇಲ್ ಮತ್ತು ಅಮೆರಿಕಕ್ಕೆ ಅರಬ್ ಮಧ್ಯವರ್ತಿಗಳ ಮೂಲಕ ಸಂದೇಶವನ್ನು ಕಳುಹಿಸಿದೆ, ಅಮೆರಿಕ ಯುದ್ಧದಲ್ಲಿ ಭಾಗಿಯಾಗದಿದ್ದರೆ ದಾಳಿಯನ್ನು ಕೊನೆಗೊಳಿಸಿ ಮಾತುಕತೆಗೆ ಮರಳಲು ಸಿದ್ಧ ವಾಗಿದೆ ಎಂದು ಹೇಳುತ್ತಿದೆ ಎಂದು ಮೂಲಗಳು ತಿಳಿಸಿವೆ.